ಸಿನಿವಾಣಿ

ಅದು ಸ್ಟಾಂಡ್​-ಅಪ್​ ಕಾಮಿಡಿಗಾಗಿ ಮಾಡಿದ್ದು ... ವಿಡಿಯೋ ಕುರಿತು ರಿಯಾ ಹೇಳಿಕೆ

ಶುಕ್ರವಾರವಷ್ಟೇ ಸುಶಾಂತ್​ ಸಿಂಗ್​ ಗೆಳತಿ ರಿಯಾ ಚಕ್ರವರ್ತಿಯ ಒಂದು ವಿಡಿಯೋ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈಗಲೂ ಆ ವಿಡಿಯೋ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಅಷ್ಟೇ ಅಲ್ಲ, ಆ ವಿಡಿಯೋ ನೋಡಿರುವ ಹಲವು ನೆಟ್ಟಿಗರು, ರಿಯಾ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳುತ್ತಿದ್ದಾರೆ. ಹೀಗಿರುವಾಗಲೇ, ರಿಯಾ ಅದೊಂದು ಸುಳ್ಳು ವಿಡಿಯೋ ಎಂದು ಹೇಳಿಕೊಂಡಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಯ ಕೇಸ್​ನಲ್ಲಿ ಈಗ ಎಲ್ಲರ ಗಮನ ರಿಯಾ ಚಕ್ರವರ್ತಿಯತ್ತ ಇದೆ. ಸುಶಾಂತ್​ ಅಕೌಂಟ್​ನಿಂದ ರಿಯಾ 15 ಕೋಟಿ ತೆಗೆದಿದ್ದರು, ಮಾನಸಿಕ ಹಿಂಸೆ ನೀಡಿದ್ದರು, ಆತ್ಮಹತ್ಯೆಗೆ ದೂಡಿದ್ದರು ಎಂಬ ಹಲವು ಆರೋಪಗಳು ಕೇಳಿ ಬಂದಿದೆ.

ಹೀಗಿರುವಾಗಲೇ ನಿನ್ನೆ ಒಂದು ವಿಡಿಯೋ ಬಿಡುಗಡೆಯಾಗಿತ್ತು. ಆ ವಿಡಿಯೋದಲ್ಲಿ ರಿಯಾ ಬಹಳ ಜಾಲಿಯಾಗಿ ಮಾತನಾಡಿದ್ದಾರೆ. ಅವನು ಗೂಂಡಾ ಆದರೆ, ನಾನು ಅವನಿಗಿಂಥ ದೊಡ್ಡವಳು. ಅವನನ್ನು ಸುಲಭವಾಗಿ ಕಂಟ್ರೋಲ್​ ಮಾಡಬಲ್ಲೆ ಎಂಬಂತಹ ಮಾತುಗಳನ್ನು ರಿಯಾ ಆಡಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದ್ದು, ಒಂದು ದಿನದಲ್ಲಿ ಸಾಕಷ್ಟು ಸುದ್ದಿ ಮಾಡಿದೆ.

ಆದರೆ, ಇದೊಂದು ನಕಲಿ ವಿಡಿಯೋ ಎಂದು ರಿಯಾ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ನಾನು ಇದಕ್ಕೂ ಮುನ್ನ ಕೆಲವೊಮ್ಮೆ ಸ್ಟಾಂಡ್​-ಅಪ್​ ಕಾಮಿಡಿ ಮಾಡಿದ್ದಿದೆ. ಅದರಲ್ಲಿ ನಾನು ತಾಯ್​ ಎಂಬ ಪಾತ್ರ ಮಾಡುತ್ತೇನೆ. ಆ ಪಾತ್ರ ಹೇಳುವ ಡೈಲಾಗ್ ಇದು. ಅದನ್ನು ಯಾವುದೋ ಸಂದರ್ಭದಲ್ಲಿ ಹೇಳಿದ್ದೆ. ನಾನು ಮಾತನಾಡುತ್ತಿರುವುದನ್ನು ವಿಡಿಯೋ ಮಾಡಲಾಗುತ್ತಿದೆ ಎಂಬ ವಿಷಯ ಸಹ ಗೊತ್ತಿರಲಿಲ್ಲ. ಬಹಳ ಜಾಲಿಯಾಗಿ ಆ ಪಾತ್ರದ ಸಂಭಾಷಣೆಗಳನ್ನು ಹೇಳುತ್ತಿದ್ದೆ. ಅದನ್ನು ಈ ಕೇಸ್​ಗೆ ಲಿಂಕ್​ ಮಾಡಿ ನನ್ನನ್ನು ಸಿಕ್ಕಿಹಾಕಿಸಲಾಗುತ್ತಿದೆ' ಎಂದು ರಿಯಾ ಹೇಳಿಕೊಂಡಿದ್ದಾರೆ.

ಸುಶಾಂತ್​ ಮತ್ತು ರಿಯಾ ಇಬ್ಬರೂ ಲಿವ್​-ಇನ್​ ರಿಲೇಶನ್​ಶಿಪ್​ನಲ್ಲಿದ್ದವರು. ಆದರೆ, ಕಾರಣಾಂತರಗಳಿಂದ ಇಬ್ಬರ ನಡುವೆ ಜಗಳ ಆಗಿದ್ದು, ಸುಶಾಂತ್​ ಮನೆಯಿಂದ ರಿಯಾ ಹೊರಟು ಹೋಗಿದ್ದರು. ಅದಾಗಿ ಒಂದು ವಾರದ ನಂತರ ಸುಶಾಂತ್​ ಅತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ರಿಯಾ ಮೇಲೆ ಸುಶಾಂತ್​ ಸಿಂಗ್​ ಅವರ ತಂದೆ ಕೆ.ಕೆ. ಸಿಂಗ್​ ಕೇಸ್​ ಹಾಕಿದ್ದಾರೆ.