ಕನ್ನಡ ಚಿತ್ರರಂಗದ ಮುಂದಿನ 10 ವರ್ಷ ಹೇಗಿರಲಿದೆ ಎಂಬುದನ್ನು ರೂಪಿಸುವ ವರ್ಷ 2026 ಎಂಬ ಮಾತುಗಳು ಕೇಳಿಬರುತ್ತಿವೆ. ಜನ ಮನರಂಜನೆಯನ್ನು ನೋಡುವ ದೃಷ್ಟಿಕೋನ ಬದಲಾಗಿರುವುದೇ ಅದಕ್ಕೆ ಕಾರಣ. ಪರಭಾಷಾ ಚಿತ್ರಗಳ ಹಾವಳಿ, ಒಟಿಟಿ ವೇದಿಕೆಗಳ ಅಬ್ಬರದ ನಡುವೆ ಸ್ಟಾರ್ ಸಿನಿಮಾಗಷ್ಟೇ ಸೀಮಿತವಾಗಿರುವ ಪ್ರೇಕ್ಷಕರು, ಥಿಯೇಟರ್ಗಳಿಂದ ವಿಮುಖರಾಗುತ್ತಿದ್ದಾರೆ. ಮತ್ತೊಂದೆಡೆ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಎಂಬ ಚಿನ್ನದ ಜಿಂಕೆಯ ಬೆನ್ನು ಹತ್ತಿರುವ ಯಶ್, ರಿಷಬ್ ಶೆಟ್ಟಿ, ರತ್ ಶೆಟ್ಟಿ, ಧ್ರುವ ಸರ್ಜಾರಂತಹ ಸ್ಟಾರ್ಗಳು ವರ್ಷಕ್ಕೆರಡು ಸಿನಿಮಾ ಬದಲು, ಮೂರ್ನಾಲ್ಕು ವರ್ಷಗಳಿಗೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಇನ್ನೊಂದೆಡೆ ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳ ಸೇರಿ ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಿರುವುದು ಸಹ ಪ್ರೇಕ್ಷಕರು ಮಲ್ಟಿಪ್ಲೆಕ್ಸ್ಗಳಿಗೆ ಬಾರದಿರಲು ಪ್ರಮುಖ ಕಾರಣವಾಗಿದೆ. ಈ ಎಲ್ಲ ಸವಾಲುಗಳ ನಡುವೆ ಈ ವರ್ಷ 20 ವಾರಗಳಲ್ಲಿ ಪ್ರತಿ ವಾರ ಸರಾಸರಿ ಐದು ಚಿತ್ರಗಳಂತೆ, ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ ಐದು ಸಿನಿಮಾಗಳು ಸೇರಿ 103 ಚಿತ್ರಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಎಷ್ಟು ಸಿನಿಮಾ ಜನ ನೋಡಿದ್ದಾರೆ? ಎಷ್ಟು ಸಿನಿಮಾ ಗಳಿಕೆಯಲ್ಲಿ ಗೆದ್ದಿವೆ? ಎಷ್ಟು ಸಿನಿಮಾ ಹೆಸರುಗಳು ನೆನಪಿನಲ್ಲಿವೆ? 103ರಲ್ಲಿ ಮೂರರಿಂದ ಆರು ಚಿತ್ರಗಳು ನೆನಪಾದರೆ, ಅದು ಕನ್ನಡ ಚಿತ್ರರಂಗದ ಅದೃಷ್ಟವೇ ಸರಿ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ.
2026ರ 20ನೇ ಶುಕ್ರವಾರವಾದ ಇಂದು ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ. ನವೀನ್ ಸಜ್ಜು ನಾಯಕನಾಗಿರುವ, ಧನುರ್ಧಾರಿ ಪವನ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ "ಲೋ ನವೀನ', ಗುರುಮೂರ್ತಿ ಆ್ಯಕ್ಷನ್-ಕಟ್ ಹೇಳಿರುವ ಅಡ್ವೆಂಚರ್ ಫ್ಯಾಂಟಸಿ ಥ್ರಿಲ್ಲರ್ "ಶಿಖಂಡಿ', ಕೆ.ಜೆ.ಚಿಕ್ಕು ನಿರ್ದೇಶನದ ಡ್ರಾಮಾ "ಮೈ ನೇಮ್ ಈಸ್ ಕೆಡಿ' ಹಾಗೂ ಪ್ರಸಿದ್ಧ್ ನಿರ್ದೇಶನದ ಆ್ಯಕ್ಷನ್ ಕ್ರೈಂ ಡ್ರಾಮಾ "ಶೇರ್'ಈ ವಾರ ಬಿಡುಗಡೆಯಾಗಿವೆ. ಅಲ್ಲಿಗೆ ಕಳೆದ ವಾರ 99 ಇದ್ದ ತೆರೆಗೆ ಬಂದ ಕನ್ನಡ ಸಿನಿಮಾಗಳ ಸಂಖ್ಯೆ ಈ ವಾರ 103ಕ್ಕೆ ತಲುಪಿದೆ.
ಬೇರೆ ಚಿತ್ರರಂಗಗಳ ಪರಿಸ್ಥಿತಿ?
ಬಾಲಿವುಡ್ನಲ್ಲಿ ಇದುವರೆಗೆ 55 ಸಿನಿಮಾಗಳು ರಿಲೀಸ್ ಆಗಿವೆ. ಅವುಗಳಲ್ಲಿ "ಧುರಂಧರ್ 2 : ದ ರಿವೆಂಜ್' (₹1847 ಕೋಟಿ) ಬ್ಲಾಕ್ಬಸ್ಟರ್ ಎನಿಸಿಕೊಂಡಿದ್ದರೆ, "ಬಾರ್ಡರ್ 2' (₹465 ಕೋಟಿ), "ಭೂತ್ ಬಂಗ್ಲಾ' (₹227 ಕೋಟಿ) ಗಳಿಕೆ ಮಾಡಿಕೊಂಡಿವೆ. ಜತೆಗೆ "ಮರ್ದಾನಿ 3', "ದ ಕೇರಳ ಸ್ಟೋರಿ 2' ಕೂಡ ಬಾಕ್ಸಾಫಿಸಿನಲ್ಲಿ ಗೆದ್ದು ಬೀಗಿವೆ. ತೆಲುಗಿನಲ್ಲಿ 74 ಚಿತ್ರಗಳು ರಿಲೀಸ್ ಆಗಿದ್ದು, "ಮನಶಂಕರ ವರಪ್ರಸಾದಗಾರು' ₹300 ಕೋಟಿಗೂ ಅಧಿಕ ಗಳಿಕೆ ಮಾಡಿಕೊಂಡಿದ್ದು, "ಕಪಲ್ ಫ್ರೆಂಡ್ಲಿ', "ಅನಗನಗ ಒಕ ರಾಜು', "ನಾರಿ ನಾರಿ ನಡುಮ ಮುರಾರಿ' ಸೇರಿ ಕೆಲ ಚಿತ್ರಗಳು ಬಾಕ್ಸಾಫಿಸಿನಲ್ಲಿ ಉತ್ತಮ ಗಳಿಕೆ ಮಾಡಿಕೊಂಡಿವೆ. ತಮಿಳಿನಲ್ಲೂ 76 ಚಿತ್ರಗಳು ತೆರೆಗೆ ಬಂದಿದ್ದು, "ತಾಯಿ ಕಿಳವಿ', "ಯೂತ್', "ವಿತ್ ಲವ್' ಸಿನಿಮಾಗಳು ಕಡಿಮೆ ಬಜೆಟ್ನಲ್ಲಿ ರಿಲೀಸ್ ಆಗಿದ್ದರೂ 10 ಪಟ್ಟು ಹೆಚ್ಚು ಗಳಿಕೆ ಮಾಡಿಕೊಳ್ಳುವ ಮೂಲಕ ದೊಡ್ಡ ಯಶಸ್ಸು ಗಳಿಸಿವೆ. ಇನ್ನು ಮಲಯಾಳಂನಲ್ಲಿ "ವಾಳ 2' (₹235 ಕೋಟಿ), "ಆಡು 3' (₹119 ಕೋಟಿ) ಎರಡು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ್ದು "ಭರತನಾಟ್ಯಂ 2 ಮೋಹಿನಿಯಾಟ್ಟಂ', "ಚತ್ತ ಪಚ್ಚ', "ಪ್ರಕಂಬಾನಂ' ಚಿತ್ರಗಳು ಭರ್ಜರಿ ಗಳಿಕೆ ಮಾಡಿಕೊಂಡಿವೆ.
ಹೀಗೆ ಪರಭಾಷಾ ಚಿತ್ರಗಳು ₹100 ಕೋಟಿ ಕ್ಲಬ್, ₹200 ಕೋಟಿ ಕ್ಲಬ್ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಕನ್ನಡ ಚಿತ್ರಗಳು ಈ ವರ್ಷ ಇನ್ನೂ ₹50 ಕೋಟಿ ಕ್ಲಬ್ ("ಕೆಡಿ' ಹೊರತುಪಡಿಸಿ) ಸೇರಬೇಕಿದೆ. ಆದರೂ ಕಡಿಮೆ ಬಜೆಟ್ನಲ್ಲಿ ಮೂಡಿಬಂದ "ಲವ್ ಮಾಕ್ಟೇಲ್ 3', "ರಕ್ಕಸಪುರದೋಳ್', "ತೀರ್ಥರೂಪ ತಂದೆಯವರಿಗೆ', ಜತೆಗೆ "ಲ್ಯಾಂಡ್ಲಾರ್ಡ್' ಸೇರಿ ಕೆಲ ಚಿತ್ರಗಳು ಬಾಕ್ಸಾಫಿಸಿನಲ್ಲಿ ಯಶಸ್ಸು ಕಂಡಿವೆ. ಇನ್ನು ಈ ನಾಲ್ಕೂವರೆ ತಿಂಗಳಲ್ಲಿ ಡಾರ್ಲಿಂಗ್ ಕೃಷ್ಣ, ದುನಿಯಾ ವಿಜಯ್, ಸತೀಶ್ ನೀನಾಸಂ, ವಿಜಯ್ ರಾವೇಂದ್ರ, ಧ್ರುವ ಸರ್ಜಾ, ಪೃಥ್ವಿ ಅಂಬಾರ್, ಉಪೇಂದ್ರ (ರಕ್ತ ಕಾಶ್ಮೀರ), ರಾಜ್ ಬಿ.ಶೆಟ್ಟಿ ನಟಿಸಿರುವ ತಲಾ ಒಂದು ಸಿನಿಮಾಗಳು ರಿಲೀಸ್ ಆಗಿವೆಯಷ್ಟೆ. ಆದರೆ, ಎ ಶ್ರೇಣಿಯ ಸ್ಟಾರ್ಗಳು ಎನಿಸಿಕೊಂಡಿರುವ ಯಾವ ನಟರ ಚಿತ್ರಗಳೂ ತೆರೆಗೆ ಬಂದಿಲ್ಲ. ಸದ್ಯದ ಚಂದನವನದ ದುಸ್ಥಿತಗೆ ಅದೂ ಒಂದು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.