ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಅಮೂಲ್ಯ ಕೈಯಲ್ಲಿದ್ದ ಆ ಪುಟ್ಟ ಮಗು ಈಗ ಹೇಗಿದ್ದಾನೆ ಗೊತ್ತಾ? ವಿಡಿಯೋ ವೈರಲ್...Cheluvina Chittara
- 'ಚೆಲುವಿನ ಚಿತ್ತಾರ' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಟಿಸಿದ್ದ ಆ ಪುಟ್ಟ ಮಗು ಈಗ ಹೇಗಿದ್ದಾನೆ ಗೊತ್ತಾ?
- ಗಣೇಶ್-ಅಮೂಲ್ಯ ಜೊತೆ ಕಣ್ಣೀರು ತರಿಸಿದ್ದ ಆ ಮುದ್ದು ಕಂದಮ್ಮ ಈಗ ಹರೆಯದ ಯುವಕ
- ಶೂಟಿಂಗ್ ವೇಳೆ ಆರು ತಿಂಗಳ ಮಗುವಾಗಿದ್ದ ಶುಶ್ರೂತ್ಗೆ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುವ ಆಸೆ!
Cheluvina Chittara : ಕಾಲ ಎಷ್ಟೇ ಉರುಳಿದರೂ ಕೆಲವೊಂದು ಸಿನಿಮಾಗಳನ್ನು ನಾವೆಂದೂ ಮರೆಯಲ್ಲ. ಅದರಲ್ಲಿಯೂ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಅಭಿನಯಿಸಿದ ಬಾಲನಟರು ಅಥವಾ ಪುಟ್ಟ ಮಗುವಿನ ಪಾತ್ರದಲ್ಲಿದ್ದವರು ಈಗ ಹೇಗಿರುತ್ತಾರೆ? ಎಲ್ಲಿದ್ದಾರೆ? ಅನ್ನೋ ಕುತೂಹಲ ಪ್ರತಿಯೊಬ್ಬ ಸಿನಿಪ್ರೇಮಿಯಲ್ಲೂ ಇದ್ದೇ ಇರುತ್ತದೆ. ನೀವೆಲ್ಲ ಚೆಲುವಿನ ಚಿತ್ತಾರ ಸಿನಿಮಾ ನೋಡಿರಬಹುದು. ಎಸ್. ನಾರಾಯಣ್ ನಿರ್ದೇಶನದಲ್ಲಿ 2007ರಲ್ಲಿ ತೆರೆಕಂಡು ಸ್ಯಾಂಡಲ್‌ವುಡ್‌ನಲ್ಲಿ ಇತಿಹಾಸ ಸೃಷ್ಟಿಸಿದ 'ಚೆಲುವಿನ ಚಿತ್ತಾರ' ಚಿತ್ರವು, ಪ್ರೇಕ್ಷಕರ ಎದೆಯಲ್ಲಿ ಎಂದಿಗೂ ಮಾಸದ ಕಾವ್ಯಮಯ ಪ್ರೇಮಕಥೆಯಾಗಿದೆ. 'ಗೋಲ್ಡನ್ ಸ್ಟಾರ್' ಗಣೇಶ್ ಹಾಗೂ ನಟಿ ಅಮೂಲ್ಯ ಜೋಡಿಯ ಕಣ್ಣೀರಿನ ಕಥೆ, ಮನೋಮೂರ್ತಿ ಸಂಗೀತ ಸಂಯೋಜನೆಯ ಹಿಟ್ ಗೀತೆಗಳು ಮತ್ತು ಕ್ಲೈಮ್ಯಾಕ್ಸ್‌ನ ಹೃದಯವಿದ್ರಾವಕ ದೃಶ್ಯಗಳು ಪ್ರತಿಯೊಬ್ಬ ಸಿನೆಪ್ರಿಯನ ಮನಸ್ಸಿನಲ್ಲೂ ಇಂದಿಗೂ ಹಸಿಯಾಗಿವೆ.
ಚೆಲುವಿನ ಚಿತ್ತಾರ ಚಿತ್ರದ ಕ್ಲೈಮ್ಯಾಕ್ಸ್ ಇಂದಿಗೂ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಏಕೆಂದರೆ, ಗಣೇಶ್ ಅವರು ಹುಚ್ಚನ ಪಾತ್ರದಲ್ಲಿ ಹಾಗೂ ಅಮೂಲ್ಯ ಪಶ್ಚಾತಾಪದಿಂದ ಗೋಳಿಡುವ ಪಾತ್ರದಲ್ಲಿ ಬಹಳ ಸೊಗಸಾಗಿ ನಟಿಸಿದ್ದಾರೆ. ಇನ್ನೂ ಈ ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲರ ಗಮನ ಸೆಳೆದ ಮತ್ತೊಂದು ಪಾತ್ರವೆಂದರೆ, ಅಮೂಲ್ಯ ಕೈಯಲ್ಲಿದ್ದ ಆ ಪುಟ್ಟ ಮುದ್ದು ಮಗು. ಪ್ರೀತಿಸಿದ ಹುಡುಗಿ ಸಿಗಲಿಲ್ಲ ಅಂತ ಮಾದೇಶ (ಗಣೇಶ್) ಪಾತ್ರಧಾರಿ ಹುಚ್ಚನಾಗಿ ಬೀದಿ ಬೀದಿ ಅಲೆದಾಡುವಾಗ, ಅದನ್ನು ನೋಡಿ ಅಮೂಲ್ಯ ಕೈಯಲ್ಲಿದ್ದ ಪುಟ್ಟ ಮಗು ನಗುತ್ತದೆ. ಅಲ್ಲದೆ, ಮರುಕ್ಷಣದಲ್ಲೇ ಆ ಮಗು ಅಳುತ್ತದೆ. ಏನಾಯಿತು ಪುಟ್ಟ ಎಂದು ಕೇಳುತ್ತಾ ಐಶ್ವರ್ಯಾ ಪಾತ್ರಧಾರಿ ಅಮೂಲ್ಯ ಮೇಲೆತ್ತಿ ನೋಡಿದಾಗ ತನ್ನ ಪ್ರಿಯಕರ ಮಾದೇಶ ಹುಚ್ಚನಾಗಿರುವುದನ್ನು ಕಂಡು ಐಶ್ವರ್ಯಾ ಪ್ರಜ್ಞೆ ತಪ್ಪುತ್ತಾಳೆ.
ಅಂದು ತನ್ನ ಮುದ್ದಾದ ಮುಖದಿಂದ ಎಲ್ಲರ ಗಮನ ಸೆಳೆದಿದ್ದ ಆ ಮಗು ಇಂದು ಹೇಗಿದ್ದಾನೆ ಗೊತ್ತಾ? ಆತನನ್ನು ನೋಡಿದರೆ ನಿಜಕ್ಕೂ ಆ ಮಗು ಇವನೇನಾ ಎನ್ನುತ್ತೀರಿ? ಅಂದಿನ ಪುಟ್ಟ ಮಗು ಇಂದು ಮೀಸೆ ಬೆಳೆದಿರುವ ಹರೆಯದ ಹುಡಗನಾಗಿದ್ದಾನೆ. ಅಲೆಮಾರಿ ಅಮಿತ್ ಎಂಬ ಯೂಟ್ಯೂಬರ್ ಒಬ್ಬರು ಆ ಹುಡುಗನನ್ನು ಪರಿಚಯಿಸಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿರುವ ಹುಡುಗನ ಹೆಸರು ಶುಶ್ರೂತ್ ಪಾಟೀಲ್. ನೀವೇ ಆ ಹುಡುಗ ಅನ್ನೋದಕ್ಕೆ ನಿಮ್ಮ ಬಳಿ ಏನಾದರೂ ಸಾಕ್ಷಿ ಇದೆಯಾ ಎಂದು ಯೂಟ್ಯೂಬರ್ ಕೇಳಿದಾಗ, ಹೌದು ಸರ್ ನನ್ನ ಬಳಿ ಸಾಕ್ಷಿ ಇದೆ. ನಮ್ಮ ಮನೆ ಬಳಿ ಹಿಂದೆ ಇದ್ದ ಶಾಪ್ ಇದು. ಇಲ್ಲೇ ಶೂಟಿಂಗ್ ನಡೆದಿದ್ದು ಎಂದು ಆ ಹುಡುಗ ಹೇಳುತ್ತಾನೆ. ಅಲ್ಲದೆ, ವಯಸ್ಸಾದ ವ್ಯಕ್ತಿಯ ಜೊತೆ ಕುಳಿತಿರುವ ತನ್ನ ಬಾಲ್ಯದ ಫೋಟೋವನ್ನು ಪಾಟೀಲ್ ತೋರಿಸುತ್ತಾರೆ. ಫೋಟೋದಲ್ಲಿರುವ ಮುದ್ದು ಮಗು ಮತ್ತು ಸಿನಿಮಾದಲ್ಲಿರುವ ಮಗು ಒಂದೇ ಎಂಬುದು ಖಚಿತವಾಗುತ್ತದೆ.
ಶೂಟಿಂಗ್ ನಡೆಯಬೇಕಾದರೆ ನನಗೆ ಆರು ತಿಂಗಳು. ಶೂಟಿಂಗ್ ಮಾಡುವ ಜಾಗದಲ್ಲೇ ನಮ್ಮ ಮನೆ ಇತ್ತು. ನಾನು ಈಗ ಬೀದರ್ನಲ್ಲಿದ್ದೇನೆ. ಶೂಟಿಂಗ್ ಸಮಯದಲ್ಲಿ ನನ್ನ ತಾಯಿ ನನ್ನನ್ನು ಹಿಡಿದುಕೊಂಡು ವಾಕಿಂಗ್ ಮಾಡುತ್ತಿದ್ದರೂ ಅದೇ ಸಂದರ್ಭದಲ್ಲಿ ಶೂಟಿಂಗ್ ಮಾಡುವಾಗ ಯಾವುದಾದರೂ ಒಂದು ಮಗು ಇದ್ದರೆ ಕರೆದುಕೊಂಡು ಬನ್ನಿ ಅಂತಾ ಕೇಳಿದರಂತೆ. ಆಗ ಗೊತ್ತಿದ್ದವರು ನಮ್ಮ ತಾಯಿಯ ಬಳಿ ಬಂದು ನನ್ನನ್ನು ಕರೆದುಕೊಂಡು ಹೋದರು ಎಂದು ಆ ಹುಡುಗ ಹೇಳಿದ್ದಾನೆ.
ಅಂದಹಾಗೆ, ಶುಶ್ರೂತ್ ಪಾಟೀಲ್ಗೆ ಮುಂದೆ ಸಿನಿಮಾ ರಂಗಕ್ಕೆ ಬರುವ ಆಸೆ ಇದೆ. ಸದ್ಯ ನಟನಾ ಶಾಲೆಗೆ ಸೇರಬೇಕೆಂದು ಬಯಸಿದ್ದು, ಮುಂದೊಂದು ದಿನ ಸಿನಿಮಾ ಮಾಡಬೇಕೆಂದ ಬಯಕೆ ಇಟ್ಟುಕೊಂಡಿದ್ದಾರೆ. ಸದ್ಯ ವೈರಲ್ ವಿಡಿಯೋ ನೋಡಿದವರಂತೂ ಆ ಪುಟ್ಟ ಕಂದಮ್ಮ ಇವನೇನಾ? ಆಗಿನಷ್ಟೇ ಮುದ್ದಾಗಿದ್ದಾನೆ. ಒಳ್ಳೆಯ ನಟನೆ ಬೆಳೆಸಿಕೊಂಡರೆ ಸಿನಿಮಾ ಕ್ಷೇತ್ರದಲ್ಲಿ ಮಿಂಚಬಹುದು ಎಂದು ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.