ಸಿನಿವಾಣಿ

ಆ್ಯಕ್ಟ್​ 1978 ಬಿಡುಗಡೆಗೆ ದಿನಾಂಕ ನಿಗದಿ

ಬೆಂಗಳೂರು: ನಿರ್ದೇಶಕ ಮಂಸೋರೆ ಕೊನೆಗೂ ಧೈರ್ಯ ಮಾಡಿದ್ದಾರೆ. ಚಿತ್ರಪ್ರದರ್ಶನಕ್ಕೆ ಅನುವು ಸಿಕ್ಕಿ ನಾಲ್ಕು ವಾರಗಳು ಕಳೆದರೂ ಇಲ್ಲಿಯವರೆಗೂ ಒಂದೇ ಒಂದು ಹೊಸ ಸಿನಿಮಾ ಬಿಡುಗಡೆ ಆಗಿಲ್ಲ. ಬೇರೆ ಯಾವ ಚಿತ್ರತಂಡದವರು ಸಹ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವ ಧೈರ್ಯ ತೋರಿಸುತ್ತಿಲ್ಲ. ಇದೀಗ ಆ ದಿಟ್ಟತನದ ಸಾಹಸಕ್ಕೆ ‘ಆಕ್ಟ್ 1978’ ಚಿತ್ರದ ನಿರ್ದೇಶಕರು ಮತ್ತು ನಿರ್ವಪಕರು ಮುಂದಾಗಿದ್ದಾರೆ.

ನವೆಂಬರ್ 20ರಂದು ರಾಜ್ಯದ ಹಲವು ಮಲ್ಟಿಪ್ಲೆಕ್ಸ್ ಮತ್ತು ಏಕಪರದೆ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ಇತ್ತೀಚೆಗಷ್ಟೇ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದ್ದರು. ಮಂಸೋರೆ ಆಯ್ದುಕೊಂಡ ಕಥೆಗೂ ಅವರಿಂದ ಮೆಚ್ಚುಗೆ ಸಿಕ್ಕಿತ್ತು. ಪಿಆರ್​ಕೆ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿರುವ ಟ್ರೇಲರ್​ಗೆ ಹೆಚ್ಚುಹೆಚ್ಚು ಲೈಕ್ಸ್ ಗಳು ದೊರೆಯುತ್ತಿವೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಬಿಡುಗಡೆ ನಿರ್ಧಾರಕ್ಕೆ ಬಂದು ದಿನಾಂಕವನ್ನು ಪ್ರಕಟಿಸಲಾಗಿದೆ.

ಯಜ್ಞಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಗರ್ಭಿಣಿ ಮಹಿಳೆಯ ತೊಳಲಾಟ, ಸರ್ಕಾರಿ ಕಚೇರಿಯಲ್ಲಿನ ವಿಳಂಬ ನೀತಿ ಮತ್ತು ಒಂದಷ್ಟು ನೈಜ ಘಟನೆಗಳನ್ನು ಮಿಶ್ರಣ ಮಾಡಿ ‘ಆಕ್ಟ್ 1978’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಂಸೋರೆ. ದೇವರಾಜ್ ನಿರ್ವಣದಲ್ಲಿ ಸಿದ್ಧವಾಗಿರುವ ಈ ಚಿತ್ರದಲ್ಲಿ 50ಕ್ಕೂ ಅಧಿಕ ಪೋಷಕ ನಟರು ನಟಿಸಿರುವುದು ಚಿತ್ರದ ಹೆಚ್ಚುಗಾರಿಕೆ. ಸತ್ಯ ಹೆಗಡೆ ಛಾಯಾಗ್ರಹಣ, ರೋನಾಡ ಬಕ್ಕೇಶ್ ಮತ್ತು ರಾಹುಲ್ ಶಿವಕುಮಾರ್ ಸಂಗೀತದ ಹೊಣೆ ಹೊತ್ತರೆ, ಟಿ.ಕೆ. ದಯಾನಂದ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ.