ಸಿನಿವಾಣಿ

500-600 ವಿಕೆಟ್​ಗಳು ಬೀಳುತ್ತವೆ: ತಮಿಳು ಚಿತ್ರರಂಗದ ವಿರುದ್ಧ ಬಾಂಬ್​ ಸಿಡಿಸಿದ ನಟಿ ರೇಖಾ ನಾಯರ್!

ಚೆನ್ನೈ: ನ್ಯಾಯಮೂರ್ತಿ ಹೇಮಾ ಸಮಿತಿ ನೀಡಿರುವ ವರದಿ ಕೇರಳ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೇ ಭಾರಿ ಸಂಚಲನ ಮೂಡಿಸಿದೆ. ಈ ವರದಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಸ್ಟಾರ್ ನಟಿಯರು ಕೂಡ ಚಿತ್ರರಂಗದಲ್ಲಿ ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಕಾಲಿವುಡ್​ ನಟಿ ರೇಖಾ ನಾಯರ್​ ತಮಿಳು ಚಿತ್ರರಂಗದ ವಿರುದ್ಧ ಹೊಸ ಬಾಂಬ್​​ ಸಿಡಿಸಿದ್ದಾರೆ.

ಕಾಲಿವುಡ್​ ನಟ ಪಾರ್ಥಿಬನ್​ ನಿರ್ದೇಶನದ ಇರವಿನ್​ ನಿಹಾಲ್​ ಸಿನಿಮಾದಲ್ಲಿ ಬೆತ್ತಲೆ ದೃಶ್ಯದಲ್ಲಿ ನಟಿಸುವ ಮೂಲಕ ಭಾರೀ ಸುದ್ದಿಯಾಗಿದ್ದ ನಟಿ ರೇಖಾ ನಾಯರ್​ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ತಮಿಳು ಚಿತ್ರರಂಗದಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ. ಹೇಮಾ ಸಮಿತಿ ವರದಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಸ್ಫೋಟಕ ಸಂಗತಿಯನ್ನು ರೇಖಾ ನಾಯರ್​ ಬಿಚ್ಚಿಟ್ಟಿದ್ದಾರೆ.

ಸಿನಿಮಾ ಆರಂಭದಿಂದಲೂ ಲೈಂಗಿಕ ಕಿರುಕುಳ ಇದೆ. ಆಗಿನ ಕಾಲದಲ್ಲಿ ಮಾಧ್ಯಮಗಳ ಬೆಳವಣಿಗೆಯ ಕೊರತೆಯಿಂದ ಅನೇಕರು ಈ ಚಿತ್ರರಂಗದಲ್ಲಿ ಅಡ್ಜಸ್ಟ್ ಮಾಡಿಕೊಳ್ಳುತ್ತಿದ್ದರು. ಅದೇ ವೇಳೆ ಹೊಂದಾಣಿಕೆಗೆ ಹೊಂದಿಕೊಳ್ಳಲಾಗದೆ ಸಿನಿಮಾದಿಂದ ಹೊರಗುಳಿದವರೂ ಸಾಕಷ್ಟಿದ್ದಾರೆ ಎಂದರು. ತಮಿಳು ಚಿತ್ರರಂಗದಲ್ಲಿ ಇಂತಹ ಲೈಂಗಿಕ ಕಿರುಕುಳಗಳು ಲಕ್ಷಗಟ್ಟಲೆ ಇವೆ ಎಂದಿದ್ದಾರೆ.

ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡಿದರೆ ಸಿನಿಮಾಗಳಲ್ಲಿ ಅವಕಾಶ ಕೊಡುವುದಿಲ್ಲ ಅಂತ ಅನೇಕ ನಟಿಯರು ಬಾಯಿ ಮುಚ್ಚಿಕೊಂಡಿದ್ದಾರೆ. ಹೇಮಾ ಸಮಿತಿ ವರದಿ ಬಳಿಕ ಮಲಯಾಳಂನಲ್ಲಿ ಕನಿಷ್ಠ 10 ರಿಂದ 20 ವಿಕೆಟ್ ಬೀಳಲಿದೆ. ಅದೇ ತಮಿಳು ಸಿನಿಮಾದ ಪಟ್ಟಿ ನೋಡಿದರೆ 500 ರಿಂದ 600 ವಿಕೆಟ್​ಗಳು ಬೀಳುತ್ತವೆ. ಚಿತ್ರರಂಗದಲ್ಲಿ ಪ್ರತಿಭೆಗೆ ಗೌರವವಿಲ್ಲ. ಚೆನ್ನಾಗಿ ನಟನೆ, ಡ್ಯಾನ್ಸ್ ಮಾಡುವವರಿಗಿಂತ ಹೇಳಿದ್ದನ್ನು ಮಾಡುವವರಿಗೆ ಆದ್ಯತೆ ಎಂದು ರೇಖಾ ನಾಯರ್​ ಆರೋಪಿಸಿದರು.

ಮಲಯಾಳಂನಲ್ಲಿ ಉತ್ತುಂಗದಲ್ಲಿದ್ದ ನಟಿ ಇಲ್ಲಿನ ಕಿರುಕುಳ ತಾಳಲಾರದೆ ಊರು ಬಿಟ್ಟು ಓಡಿ ಹೋಗಿದ್ದಾಳೆ. ದೂರು ನೀಡಿದರೆ ಕ್ರಮಕೈಗೊಳ್ಳುವ ಸ್ಥಿತಿಯಲ್ಲಿ ತಮಿಳು ಚಿತ್ರ ಸಂಘಗಳು ಇವೆಯೇ ಎಂಬುದು ಪ್ರಶ್ನಾರ್ಹ. ಕಚೇರಿಗೆ ಹೋದರೆ ಅಲ್ಲಿ ಯಾರೂ ಇರುವುದಿಲ್ಲ. ಮಲಯಾಳಂ ಮಾತ್ರವಲ್ಲದೆ ಎಲ್ಲ ಭಾಷೆಯ ಚಿತ್ರಗಳಲ್ಲೂ ಇಂತಹ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ರೇಖಾ ಹೇಳಿದರು.

ಏನಿದು ಹೇಮಾ ಸಮಿತಿ ವರದಿ?

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್​)