ಸಿನಿವಾಣಿ

ನಾಗಿಣಿಯ ರೀಲ್ ಆರತಕ್ಷತೆ; ಜೀ ಕನ್ನಡದಿಂದ ಹೀಗೊಂದು ಪ್ರಯತ್ನ

Webdesk - Ravikanth

ಜೀ ಕನ್ನಡ ವಾಹಿನಿ ಇದೀಗ ವೀಕ್ಷಕರ ಮಧ್ಯದಲ್ಲೇ ವಿವಾಹ ಆರತಕ್ಷತೆ, ಅದ್ದೂರಿ ಭೋಜನ ಆಯೋಜಿಸಿ ಮತ್ತೊಂದು ಪ್ರಥಮಕ್ಕೆ ನಾಂದಿ ಹಾಡಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ರೀಲ್ ಆರತಕ್ಷತೆಯನ್ನು ರಿಯಲ್ ಜನರ ಮಧ್ಯದಲ್ಲಿ ಆಯೋಜಿಸಿದೆ. ದಾವಣಗೆರೆಯ ಜೀ ಕನ್ನಡ ವೀಕ್ಷಕರು ಆರತಕ್ಷತೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ತ್ರಿಶೂಲ್ ಮತ್ತು ಶಿವಾನಿ ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ‘ನಾಗಿಣಿ-2’ ಧಾರಾವಾಹಿ ಖ್ಯಾತಿಯ ತ್ರಿಶೂಲ್ ಮತ್ತು ಶಿವಾನಿ ವಿವಾಹದ ಆರತಕ್ಷತೆಯನ್ನು ದಾವಣಗೆರೆ ಜಿಲ್ಲೆಯಲ್ಲಿ ಸ್ಪರ್ಧೆಯ ಮೂಲಕ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮನೆಮನೆಗೂ ಭೇಟಿ ನೀಡಿ ಜನರನ್ನು ಆಹ್ವಾನಿಸಿ ಒಂದು ಮಿಸ್ ್ಡಾಲ್ ಮೂಲಕ ಅವರನ್ನು ಆಯ್ಕೆ ಮಾಡಲಾಗಿತ್ತು. ಹಾಗೆ ಆಯ್ಕೆಯಾದವರನ್ನು ಮದುವೆ ಮಂಟಪಕ್ಕೆ ಆಹ್ವಾನಿಸಿ, ನಾಗಿಣಿ ತಂಡದ ಜತೆಗೆ ಸಂವಾದವನ್ನೂ ನಡೆಸಲಾಯಿತು. ಪ್ರತಿಯೊಬ್ಬರು ಧಾರಾವಾಹಿ ಕುರಿತಾದ ತಮ್ಮ ಕುತೂಹಲವನ್ನು ತಂಡದೊಂದಿಗೆ ಸಂವಾದದಲ್ಲಿ ಪರಿಹರಿಸಿಕೊಂಡರು. ಎಲ್ಲರಿಗೂ ತಂಡದೊಂದಿಗೆ, ವಿವಾಹಿತ ಜೋಡಿಯೊಂದಿಗೆ ಸೆಲ್ಪಿ ತೆಗೆದುಕೊಳ್ಳುವ ಅವಕಾಶ, ಬಾಳೆಎಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.