ಸಿನಿವಾಣಿ

ಅನಿಲ್ ಕಪೂರ್ ಜತೆಗೆ ಅಭಿನಯಿಸುವುದನ್ನು ಮಾಧುರಿ ನಿಲ್ಲಿಸಿದ್ದೇಕೆ ಗೊತ್ತಾ?

ಭಾರತೀಯ ಚಿತ್ರರಂಗ ಕಂಡ ಅತ್ಯಂತ ಜನಪ್ರಿಯ ಮತ್ತು ಮೋಸ್ಟ್ ವಾಂಟೆಡ್ ಜೋಡಿ ಎಂದರೆ ಅದು ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅವರದ್ದು. ‘ತೇಜಾಬ್’ ಎಂಬ ಸೂಪರ್ ಹಿಟ್ ಚಿತ್ರದಲ್ಲಿ ಮೊದಲ ಬಾರಿಗೆ ಜತೆಯಾಗಿ ನಟಿಸಿದ ಈ ಜೋಡಿ, ನಂತರದ ವರ್ಷಗಳಲ್ಲಿ ‘ರಾಮ್ ಲಖನ್’, ‘ಬೇಟ’, ‘ಖೇಲ್’, ‘ರಾಜಕುಮಾರ್’, ‘ಜಿಂದಗಿ ಏಕ್ ಜುವಾ’, ‘ಜಮಾಯಿ ರಾಜ’ ಮುಂತಾದ ಹಲವು ಚಿತ್ರಗಳಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದರು. ರಾಜಕುಮಾರ್ ಸಂತೋಷಿ ನಿರ್ದೇಶನದ ‘ಪುಕಾರ್’ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಆ ನಂತರ ಇಬ್ಬರೂ ಒಟ್ಟಿಗೆ ನಟಿಸಲಿಲ್ಲ. ಇಷ್ಟಕ್ಕೂ ಅನಿಲ್ ಕಪೂರ್ ಜತೆಗೆ ಯಾಕೆ ನಟಿಸಲಿಲ್ಲ ಎಂದು ಮಾಧುರಿ ಇದೀಗ ಬಹಿರಂಗಪಡಿಸಿದ್ದಾರೆ.

ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅವರದ್ದು ಅತ್ಯಂತ ಜನಪ್ರಿಯ ಮತ್ತು ಹಿಟ್ ಜೋಡಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಮಧ್ಯೆ ಈ ರೀಲ್ ಜೋಡಿಯು, ರಿಯಲ್ ಜೋಡಿಯಾಗಲಿದೆ ಎಂಬ ಸುದ್ದಿಯೊಂದು 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ವಿಪರೀತ ಕೇಳಿಬಂದಿತ್ತಂತೆ. ಹೀಗಿರುವಾಗಲೇ, ಅನಿಲ್ ಕಪೂರ್ ಅಭಿನಯದ ಚಿತ್ರವೊಂದರ ಚಿತ್ರೀಕರಣಕ್ಕೆ ಅವರ ಪತ್ನಿ ಸುನೀತಾ ಮಕ್ಕಳನ್ನು ಕರೆದುಕೊಂಡು ಬಂದರಂತೆ. ಆ ಸಂದರ್ಭದಲ್ಲಿ ಅನಿಲ್ ಮತ್ತು ಅವರ ಕುಟುಂಬವನ್ನು ನೋಡಿದ ಮಾಧುರಿ, ಒಂದು ದೊಡ್ಡ ನಿರ್ಧಾರಕ್ಕೆ ಬಂದರಂತೆ. ಅದೇನೆಂದರೆ, ತನ್ನಿಂದ ಅವರ ಮನೆ ಒಡೆಯಬಾರದು ಎಂದು. ಆ ನಂತರ, ಅನಿಲ್ ಕಪೂರ್ ಅಭಿನಯದ ಚಿತ್ರಗಳಲ್ಲಿ ನಟಿಸುವುದನ್ನು ಬಿಡುವುದಷ್ಟೇ ಅಲ್ಲ, ಅವರಿಂದಲೇ ಅಂತರ ಕಾಯ್ದುಕೊಂಡರಂತೆ ಮಾಧುರಿ.

ಈಗ ಅನಿಲ್ ಮತ್ತು ಮಾಧುರಿ ಇಬ್ಬರಿಗೂ ವಯಸ್ಸಾಗಿದೆ. ಸಾಲದೆಂಬಂತೆ, ಅನಿಲ್ ಮಗಳು ಸೋನಮ್ ಮದುವೆಯೂ ಆಗಿದೆ. ಇನ್ನಾದರೂ ಅವರಿಬ್ಬರೂ ಜತೆಯಾಗಿ ನಟಿಸಬೇಕು ಎಂಬ ಬಾಲಿವುಡ್ ತಪಸ್ಸಿಗೆ ಕೊನೆಗೂ ಕಳೆದ ವರ್ಷ ಲ ಸಿಕ್ಕಿದೆ. ಅನಿಲ್ ಕಪೂರ್ ಜತೆಗೆ 17 ವರ್ಷಗಳ ಕಾಲ ನಟಿಸದೇ ದೂರವಿದ್ದ ಮಾಧುರಿ, ಕಳೆದ ವರ್ಷ ಬಿಡುಗಡೆಯಾದ ‘ಟೋಟಲ್ ಧಮಾಲ್’ ಚಿತ್ರದಲ್ಲಿ ಮತ್ತೊಮ್ಮೆ ನಟಿಸಿದ್ದರು. ಈ ಚಿತ್ರ ಅಷ್ಟೇನೂ ದೊಡ್ಡ ಹಿಟ್ ಅಲ್ಲದಿದ್ದರೂ, ಬಾಲಿವುಡ್‌ನ ಒಂದು ಕಾಲದ ಜನಪ್ರಿಯ ಜೋಡಿಯಾದ ಅನಿಲ್ ಮತ್ತು ಮಾಧುರಿ ಜತೆಯಾಗಿ ನಟಿಸಿದ್ದೇ ಸ್ಪೆಷಲ್ ಆಗಿತ್ತು.