ಬೆಂಗಳೂರು: ‘ಶುಭ ವಿವಾಹ’ ಎಂದರೆ ಅಲ್ಲಿ ಮೂರುಗಂಟು ಇರುವುದು ಸಂಪ್ರದಾಯ. ಆದರೆ ಮೂರುಗಂಟಿಗಾಗಿಯೇ ಶುಭ ವಿವಾಹ ನಡೆದರೆ ಹೇಗಿರಬಹುದು ಎಂಬುದನ್ನು ಕಣ್ಮುಂದೆ ತರಲಿದೆ ಕಲರ್ಸ್ ಕನ್ನಡ ವಾಹಿನಿ.
ಹೌದು.. ಕಲರ್ಸ್ ಕನ್ನಡದಲ್ಲಿ ಈಚೆಗೆ ಆರಂಭವಾಗಿರುವ ‘ಮೂರುಗಂಟು’ ಧಾರಾವಾಹಿ ಒಂದು ಕುತೂಹಲಕಾರಿ ಘಟ್ಟ ತಲುಪಿದ್ದು, ಈ ಧಾರಾವಾಹಿಯೊಳಗೆ ‘ಶುಭ ವಿವಾಹ’ ಎಂಬ ರಿಯಾಲಿಟಿ ಶೋ ನಡೆಯಲಿದೆ. ಧಾರಾವಾಹಿ ಒಳಗೆ ರಿಯಾಲಿಟಿ ಶೋ, ಅದರಲ್ಲೇ ನಾಯಕ ಮದುವೆ ಆಗುವುದು ಕನ್ನಡ ಕಿರುತೆರೆಯಲ್ಲಿ ಹೊಸ ಪ್ರಯೋಗ. ಯಾವಾಗಲೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಬಂದಿರುವ ಕಲರ್ಸ್ ಕನ್ನಡ ಈ ಬಾರಿ ಇಂಥ ಹೊಸ ಸಾಹಸಕ್ಕೆ ಮುಂದಾಗಿದೆ. ಧಾರಾವಾಹಿಯ ಆರಂಭದ ಎಪಿಸೋಡ್ಗಳಿಗೆ ಸಿಕ್ಕಿದ ಭಾರಿ ಜನಪ್ರಿಯತೆ ಈ ‘ಶುಭ ವಿವಾಹ’ದ ಎಪಿಸೋಡ್ಗಳಲ್ಲಿ ಇನ್ನಷ್ಟು ಮೇಲಕ್ಕೇರಲಿದೆ ಎಂಬುದು ಧಾರಾವಾಹಿ ನಿಮಾಪಕರ ವಿಶ್ವಾಸ.
ಈ ರಿಯಾಲಿಟಿ ಶೋನಲ್ಲಿ ಹತ್ತು ಸ್ಪರ್ಧಿಗಳಿರುತ್ತಾರೆ. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿನ ಗೊಂಬೆ ಪಾತ್ರ ಖ್ಯಾತಿಯ ನೇಹಾ ಈ ಕಾರ್ಯಕ್ರಮದ ನಿರೂಪಕಿ. ಅಡುಗೆ ಮಾಡುವುದು, ರಂಗೋಲಿ ಬಿಡಿಸುವುದು, ವಿಕ್ರಮಾದಿತ್ಯನ ಬಗ್ಗೆ ವಿವರಿಸುವುದು ಮುಂತಾದ ಸ್ಪರ್ಧೆಗಳು ಇರುತ್ತವೆ. ಪ್ರತಿ ಸುತ್ತಿನ ಕೊನೆಗೂ ಒಬ್ಬರು ಎಲಿಮಿನೇಟ್ ಆಗುತ್ತಾರೆ. ಕೊನೆಗೆ ಉಳಿಯುವವರನ್ನು ವಿಕ್ರಮಾದಿತ್ಯ ಮದುವೆ ಆಗುತ್ತಾನೆ. ಸೂಪರ್ಸ್ಟಾರ್ ವಿಕ್ರಮಾದಿತ್ಯ ಸಂಕಷ್ಟದಲ್ಲಿ ಇದ್ದಾನೆ. ಆತನ ಚಿತ್ರಗಳು ಓಡುತ್ತಿಲ್ಲ, ಸಾಲಗಾರರು ಮನೆ ಬಳಿ ಸುತ್ತುತ್ತಿರುವ ಪರಿಸ್ಥಿತಿಯಲ್ಲಿ ರಿಯಾಲಿಟಿ ಶೋ ಮೂಲಕ ಹುಡುಗಿಯನ್ನು ವರಿಸಲು ಒಪ್ಪುತ್ತಾನೆ. ಗೆಳತಿ ಜತೆ ಬಾಜಿ ಕಟ್ಟಿ ಈ ಸ್ಪರ್ಧೆಗೆ ಬರುವ ಪಾವನಿ, ತನ್ನ ಅವಳಿ ಸಹೋದರಿ ಶ್ರಾವಣಿಯಂತೆ ನಟಿಸುತ್ತಾಳೆ. ಸ್ಪರ್ಧೆಯಲ್ಲೂ ಒಂದೊಂದೇ ಸುತ್ತನ್ನು ಗೆಲ್ಲುತ್ತಾಳೆ. ಕೊನೆಗೆ ವಿಕ್ರಮಾದಿತ್ಯನನ್ನು ಮದುವೆ ಆಗುವವಳು ಅವಳೇನಾ? ಎಂಬುದು ಧಾರಾವಾಹಿಯ ಕೌತುಕದ ಅಂಶ. ‘ಮೂರುಗಂಟು’ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿರಾತ್ರಿ 9ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ.
ಧಾರಾವಾಹಿಯಲ್ಲಿ ರಿಯಾಲಿಟಿ ಶೋ ತರುವುದು ದೊಡ್ಡ ಸವಾಲು. ಇದಕ್ಕಾಗಿ ನಮ್ಮ ತಂಡ ಭಾರಿ ಶ್ರಮ ಪಟ್ಟಿದೆ. ವೀಕ್ಷಕರಿಗೆ ಪ್ರತಿ ಶೋನಲ್ಲೂ ಹೊಸದೇನಾದರೂ ನೀಡಬೇಕು ಎಂಬುದು ನಮ್ಮ ಉದ್ದೇಶ. ‘ಶುಭ ವಿವಾಹ’ದ ಎಪಿಸೋಡ್ಗಳು ವೀಕ್ಷಕರಿಗೆ ಇಷ್ಟವಾಗಲಿದೆ ಎಂದು ನಂಬಿದ್ದೇನೆ. | ಪರಮೇಶ್ವರ ಗುಂಡ್ಕಲ್ ಬಿಜಿನೆಸ್ ಹೆಡ್, ಕನ್ನಡ ಕ್ಲಸ್ಟರ್, ವಯಾಕಾಂ 18