ಸಿನಿವಾಣಿ

ರಾ ಎಂದರೆ ರೌಡಿಸಂ ಅಲ್ಲ!; ಬರ್ಕ್ಲಿ ನಂತರ ಸಿಕ್ಕ ಅವಕಾಶ..

rashmirhebbur

ಸಂತೋಷ್ ಬಾಲರಾಜ್ ಅಭಿನಯದ ‘ಬರ್ಕ್ಲಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಮಧ್ಯೆ, ಅವರು ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಅದು ಸಹ ಇತ್ತೀಚೆಗೆ ಪ್ರಾರಂಭವಾಗಿದೆ. ಹೆಸರು ‘ರಾ’. ಹೆಸರು ಕೇಳಿದರೆ, ರೌಡಿಸಂ ಕುರಿತದ್ದಾಗಿರಬಹುದು ಎಂಬ ಕಲ್ಪನೆ ಬರಬಹುದು. ಅದೂ ಅಲ್ಲವಂತೆ. ಇದೊಂದು ವಿಭಿನ್ನವಾದ ಪ್ರಯತ್ನ ಎನ್ನುತ್ತಾರೆ ನಿರ್ದೇಶಕ ಮಂಜುನಾಥ್.

ಈ ಕುರಿತು ಮಾತನಾಡುವ ಅವರು, ‘ಹೆಸರು ಕೇಳಿದರೆ ಇದೊಂದು ರೌಡಿಸಂ ಕಥೆ ಇರಬಹುದು ಎಂದೆನಿಸಬಹುದು. ಇದೊಂದು ವಿಭಿನ್ನ ಕಥೆಯುಳ್ಳ ಚಿತ್ರ. ಚಿತ್ರದ ನಾಯಕನಿಗೆ ರಾ ಲುಕ್ ಜತೆಗೆ, ಮುಗ್ಧತೆಯೂ ಬೇಕಿತ್ತು. ಈ ಎರಡೂ ನನಗೆ ಸಂತೋಷ್ ಬಾಲರಾಜ್ ಅವರಲ್ಲಿ ಕಾಣಿಸಿತ್ತು. ಹಾಗಾಗಿ, ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಕೊಂಡಿದ್ದೇವೆ. ಚಿತ್ರದಲ್ಲಿ ಸಾಯಿಕುಮಾರ್, ‘ಕಾಕ್ರೋಚ್’ ಸುಧಿ ಪ್ರಮುಖ ಪಾತ್ರಗಳಲ್ಲಿರಲಿದ್ದಾರೆ’ ಎನ್ನುತ್ತಾರೆ. ಸಂತೋಷ್​ಗೆ ಈ ಚಿತ್ರದಲ್ಲಿ ವಿಭಿನ್ನ ಪಾತ್ರವೊಂದು ಸಿಕ್ಕಿದೆಯಂತೆ.

‘ಮೂರು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಮೊದಲ ಹಂತದ ಚಿತ್ರೀಕರಣದಲ್ಲಿ ಈಗಿರುವ ರೀತಿಯಲ್ಲಿ ಇರುತ್ತೇನೆ. ಎರಡನೇ ಹಂತದ ವೇಳೆಗೆ ಲುಕ್ ಪೂರ್ತಿ ಬದಲಾಗಿರುತ್ತದೆ’ ಎನ್ನುತ್ತಾರವರು. ಚಿತ್ರವನ್ನು ಶಾಂಭವಿ ಕ್ರಿಯೇಷನ್ಸ್​ನಡಿ ವಿನುತಾ ಮಂಜುಳಾ ಮತ್ತು ಮಂಜುನಾಥ್ ನಿರ್ವಿುಸುತ್ತಿದ್ದಾರೆ.