ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಚಿತ್ರ: ರವಿಕೆ ಪ್ರಸಂಗ
ನಿರ್ದೇಶನ ಮತ್ತು ನಿರ್ಮಾಣ: ಸಂತೋಷ್ ಕೊಡೆಂಕೇರಿ
ತಾರಾಗಣ: ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಗೋವಿಂದೇಗೌಡ, ಪ್ರವಿಣ್ ಅಥರ್ವ ಮತ್ತು ಮುಂತಾದವರು.
ಆಕೆ ಸಾನ್ವಿ ಸಂಪಾಜೆ (ಗೀತಾ). ಅಪ್ಪ, ಅಮ್ಮನ ಏಕೈಕ ಸುಪುತ್ರಿ. ಚಿಕ್ಕಪ್ಪ, ಚಿಕ್ಕಮ್ಮ ಮತ್ತವರ ಮಗಳ ಜತೆ ಸಾನ್ವಿಯದು ಚಿಕ್ಕ ಅವಿಭಕ್ತ ಕುಟುಂಬ. ಆಕೆಯದೋ ವಯಸ್ಸು 28 ದಾಟಿದರೂ, 32 ಹುಡುಗರನ್ನು ನೋಡಿದರೂ ಮದುವೆ ಫಿಕ್ಸ್ ಆಗಿರುವುದಿಲ್ಲ. ಕೊನೆಗೊಮ್ಮೆ ಕೆನಡಾ ದೇಶದಲ್ಲಿ ಕೆಲಸ ಮಾಡುತ್ತಿರುವ ಸ್ಪುರದ್ರೂಪಿ ಹುಡುಗನ ಸಂಬಂಧ ಬರುತ್ತದೆ. ಆ ಹುಡುಗನನ್ನೇ ಮದುವೆಯಾಗಬೇಕೆಂದು ಅಮ್ಮ ಕೊಡಿಸಿದ ರೇಷ್ಮೆ ಸೀರೆ ಧರಿಸಲು ಸಾನ್ವಿ ನಿರ್ಧರಿಸುತ್ತಾಳೆ. ಅದಕ್ಕೆ ರವಿಕೆ ಹೊಲಿಸಲು ಚಂದ್ರಣ್ಣ ಲೇಡೀಸ್ ಟೈಲರ್ ಚಂದ್ರಶೇಖರನಿಗೆ (ಸಂಪತ್) ನೀಡುತ್ತಾಳೆ. ಆದರೆ, ರವಿಕೆ ಆಕೆಗೆ ಹೊಂದುವುದಿಲ್ಲ. ಅದನ್ನೇ ಸೀರಿಯಸ್ ಆಗಿ ಪರಿಗಣಿಸುವ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳುತ್ತಾಳೆ, ಕೋರ್ಟ್ ಮೆಟ್ಟಿಲೂ ಏರುತ್ತಾಳೆ. ಮುಂದೆ? ಕೆನಡಾ ಹುಡುಗನ ಜತೆ ಆಕೆಯ ಮದುವೆಯಾಗುತ್ತಾ? ಕೋರ್ಟ್ನಲ್ಲಿ ತೀರ್ಪು ಯಾರ ಪರ ಬರುತ್ತೆ? ಎಂಬುದರ ಸುತ್ತ ಸಂತೋಷ್ ಕೊಡೆಂಕೇರಿ "ರವಿಕೆ ಪ್ರಸಂಗ'ವನ್ನು ಹೊಲಿದಿದ್ದಾರೆ.
"ರವಿಕೆ ಪ್ರಸಂಗ' 152 ನಿಮಿಷಗಳ ಸಿನಿಮಾ. ಹಾಸ್ಯಮಯವಾಗಿಯೇ ಕಥೆ ಸಾಗುತ್ತದಾದರೂ ಅಲ್ಲಲ್ಲಿ ಹಳಿ "ತಪು$್ಪ'ತ್ತದೆ. ಆ ತಪ್ಪಿಲ್ಲದೇ "ರವಿಕೆ'ಗೆ ಕತ್ತರಿ ಪ್ರಯೋಗವಾಗಿದ್ದರೆ, ಪ್ರೇಕ್ಷಕರಿಗೆ ಡಿಸೈನ್ ಇಷ್ಟವಾಗುತ್ತಿತ್ತೇನೋ?! ಪಾವನಾ ಸಂತೋಷ್ ಅವರ ದಣ ಕನ್ನಡ ಭಾಷೆಯ ಸೊಗಡಿನ ಕಥೆ, ಸಂಭಾಷಣೆ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ಗೀತಾ ಭಾರತಿ ಭಟ್ ಮತ್ತು ಸಂಪತ್ ಮೈತ್ರೇಯ ಚಿತ್ರದ ಹೈಲೈಟ್. ಉಳಿದಂತೆ ಸುಮನ್ ರಂಗನಾಥ್, ರಾಕೇಶ್ ಮಯ್ಯ, ಪದ್ಮಜಾ ರಾವ್, ಗೋವಿಂದೇಗೌಡ, ಪ್ರವಿಣ್ ಅಥರ್ವ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.