| ಹರ್ಷವರ್ಧನ್ ಬ್ಯಾಡನೂರು
ಕನ್ನಡ ಚಿತ್ರರಂಗದಲ್ಲಿ ಹಲವು ಹೊಸ ಪ್ರಯತ್ನಗಳು ನಡೆಯುತ್ತಿವೆ. ಆಧುನಿಕತೆ ಬೆಳೆದು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಹೆಚ್ಚಿದಂತೆ, ನಮ್ಮ ಮೂಲ ಕಲಾ ಪ್ರಕಾರಗಳು ಕಣ್ಮರೆಯಾಗದಂತೆ ಎಚ್ಚರಿಕೆ ವಹಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಯಕ್ಷಗಾನವನ್ನು ವಿಶ್ವಕ್ಕೆ ತೋರಿಸಬೇಕು ಎಂಬ ಆಸೆಯೊಂದಿಗೆ ಸಂಗೀತ ನಿರ್ದೇಶಕ ರವಿ ಬಸ್ರೂರ್ ವಿಶ್ವದ ಮೊದಲ ಸಂಪೂರ್ಣ ಯಕ್ಷಗಾನ ಸಿನಿಮಾ ನಿರ್ದೇಶಿಸಿದ್ದಾರೆ. ಹೆಸರು "ವೀರ ಚಂದ್ರಹಾಸ'. ಶಿವರಾಜಕುಮಾರ್, ಗರುಡ ರಾಮ್, ಚಂದನ್ ಶೆಟ್ಟಿ, ಪುನೀತ್ ರುದ್ರನಾಗ್ ಸೇರಿ 400ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು ನಟಿಸಿರುವ ಚಿತ್ರವಿದು. ಹಾಗೇ ಸಂಪೂರ್ಣವಾಗಿ ಪಂಜಿನ ಬೆಳಕಿನಲ್ಲೇ, ರಾತ್ರಿ ಸಮಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇಂತಹ ವಿಶೇಷ ಸಿನಿಮಾ ಬಗ್ಗೆ ರವಿ ಬಸ್ರೂರ್ ವಿಜಯವಾಣಿ ಜತೆ ಮಾತನಾಡಿದ್ದಾರೆ.
* ಯಕ್ಷನಾಗ ಸಿನಿಮಾ ಮಾಡುವ ಆಲೋಚನೆ ಬಂದಿದ್ದು ಹೇಗೆ?
- ಕರಾವಳಿ ಭಾಗದವನಾದ ನಾನು ಸಣ್ಣ ವಯಸ್ಸಿನಿಂದ ಯಕ್ಷಗಾನ ನೋಡಿಕೊಂಡು ಬೆಳೆದವನು. 12 ವರ್ಷಗಳ ಹಿಂದೆ ಹೀಗೊಂದು ಕಲ್ಪನೆ ಹುಟ್ಟಿದ್ದು. ಒಮ್ಮೆ ಸಿನಿಮಾ ಮಾಡಲು ಹೊರಟೆ. ಆದರೆ, ಆಗ ನಾನು ಆರ್ಥಿಕವಾಗಿ ಅಷ್ಟು ಶಕ್ತನಾಗಿರಲಿಲ್ಲ ಜತೆಗೆ ಇನ್ನಷ್ಟು ಸಿದ್ಧತೆ ಬೇಕು ಅಂತನ್ನಿಸಿ ಸಾಧ್ಯವಾಗಿರಲಿಲ್ಲ. ಈಗ ಯಕ್ಷಗಾನವೇ ನನ್ನಿಂದ ಸಿನಿಮಾ ಮಾಡಿಸಿತು.
* "ವೀರ ಚಂದ್ರಹಾಸ' ಸಿನಿಮಾ ಬಗ್ಗೆ...
- ಇದು "ಚಂದ್ರಹಾಸ ಚರಿತ್ರ' ಆಧಾರಿತ ಐತಿಹಾಸಿಕ ಸಿನಿಮಾ. ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ನೆರವಾಗಲು ಪಕ್ಕದ ರಾಜ್ಯದ ಚಂದ್ರಹಾಸ ರಾಜನು ನಾಲ್ಕು ಅಕ್ಷೋಹಿಣಿ ಸೈನ್ಯವನ್ನು ಕಳುಹಿಸಿಕೊಟ್ಟ ಕುರಿತ ಕಥೆ. ಎಲ್ಲ ಸಿನಿಮಾಗಳಂತೆ ಎರಡೂವರೆ ತಾಸಿನ ಚಿತ್ರವಿದು.
* ತೆಂಕು ತಿಟ್ಟು, ಬಡುಗು ತಿಟ್ಟು ಎರಡೂ ವಿಧಗಳನ್ನು ಚಿತ್ರದಲ್ಲಿ ನೋಡಬಹುದೇ?
- ಹೌದು. ಬೇರೆ ಹೆಸರುಗಳಾದರೂ, ಪಾತ್ರಧಾರಿಗಳು, ವೇಷಭೂಷಣ ಬೇರೆ ರೀತಿ ಇದ್ದರೂ, ಎರಡರಲ್ಲೂ ಕಥೆ ಹೇಳುವ ರೀತಿ ಒಂದೇ. ಪ್ರಮುಖವಾಗಿ 10ರಿಂದ 15 ಪಾತ್ರಗಳ ಸುತ್ತ ಕಥೆ ಸಾಗುತ್ತದೆ. ಅದರ ಜತೆಗೆ 400ರಿಂದ 500 ಪಾತ್ರಗಳು ಇರಲಿವೆ.
* ಯಕ್ಷಗಾನ ಸಿನಿಮಾ ನಿರ್ದೇಶಿಸಲು ಎದುರಾದ ಸವಾಲುಗಳೇನು?
- 400ಕ್ಕೂ ಅಧಿಕ ಯಕ್ಷಗಾನ ಕಲಾವಿದರನ್ನು ಒಂದೆಡೆ ಸೇರಿಸುವುದು ಸಾಮಾನ್ಯ ಮಾತಲ್ಲ. ನವೀನ್ ಶೆಟ್ಟಿ ಐರ್ಬೈಲು, ನಾಗರಾಜ್ ಶೆಟ್ಟಿ ಅವರ ಬೆಂಬಲದಿಂದ ಈ ಸಿನಿಮಾ ಮಾಡಲು ಸಾಧ್ಯವಾಯಿತು. ಬಹುಶಃ ಅವರಿಲ್ಲದಿದ್ದರೆ ಈ ಸಿನಿಮಾ ಸಾಧ್ಯವಾಗುತ್ತಿರಲಿಲ್ಲ. ಬೆಂಗಳೂರಿನಲ್ಲೇ ಸೆಟ್ ಹಾಕಿ ಶೂಟಿಂಗ್ ನಡೆಸಿದೆವು. ಎಲ್ಲಿಯೂ ಕೃತಕ ಲೈಟ್ಸ್ ಬಳಸದೇ, ಎಲ್ಲ ಸನ್ನಿವೇಶಗಳನ್ನೂ ಪಂಜಿನ ಬೆಳಕಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಅದರಿಂದ ಮೂರು ಪಟ್ಟು ಬಜೆಟ್ ಕೂಡ ಹೆಚ್ಚಾಯಿತು. 500 ಜನ ಕಲಾವಿದರಿಗೆ ಮೇಕಪ್, ಕಾಸ್ಟ್ಯೂಮ್ ಮಾಡಲು 1000 ಜನ ಬೇಕಿತ್ತು. ಹೀಗೆ 1500 ಜನ ಸೆಟ್ನಲ್ಲಿ ಇರುತ್ತಿದ್ದೆವು. ಜತೆಗೆ ಕುದುರೆ ಸವಾರಿ, ಯುದ್ಧದ ಸನ್ನಿವೇಶಗಳಿಗೆ ತರಬೇತಿ ನೀಡಿದೆವು. ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ತರಬೇತಿ ಕೊಟ್ಟು, ಸಂಜೆ 6ಗಂಟೆಯಿಂದ ಬೆಳಗ್ಗೆ 6ರವರೆಗೆ ಮೂರು ಶೆಡ್ಯೂಲ್ಗಳಲ್ಲಿ ಶೂಟಿಂಗ್ ನಡೆಸಿದೆವು.
* ಸಿನಿಮಾ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಪ್ಲ್ಯಾನಿಂಗ್ ಹೇಗಾಯಿತು?
- ನನ್ನ ಕರಿಯರ್ನಲ್ಲಿ 140 ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಈ ಚಿತ್ರ ನೀಡಿದಷ್ಟು ಖುಷಿ ಎಂದೂ ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ಸಿನಿಮಾ ಹಾಡುಗಳಲ್ಲಿ 600ರಿಂದ 700 ಟ್ರ್ಯಾಕ್ಸ್ ಇರುತ್ತವೆ. ಆದರೆ, ಈ ಚಿತ್ರದಲ್ಲಿ ಚಂಡೆ, ಮದ್ದಳೆ ಸೇರಿ 1600ರಿಂದ 1700 ಟ್ರ್ಯಾಕ್ಸ್ ಇವೆ. ಹೀಗಾಗಿ ಯಾರೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲದಷ್ಟು ವಿಭಿನ್ನವಾಗಿ ಹಿನ್ನೆಲೆ ಸಂಗೀತ ಮೂಡಿಬಂದಿದೆ. ಆಧುನಿಕ ಸೌಂಡ್ ಕೂಡ ನಮ್ಮ ಚಂಡೆ, ಮದ್ದಳೆಯ ಸದ್ದಿನ ಮುಂದೆ ಏನೂ ಇಲ್ಲ. ಇಡೀ ಥಿಯೇಟರ್ ಶೇಕ್ ಆಗುತ್ತದೆ. ದೇಸೀ ಸಂಗೀತ ವಾದ್ಯಗಳ ತಾಕತ್ತು ಏನೆಂದು ಗೊತ್ತಾಗುತ್ತದೆ.
* ಶಿವರಾಜಕುಮಾರ್ ಚಿತ್ರತಂಡ ಸೇರಿದ್ದು ಹೇಗೆ?
- ಒಮ್ಮೆ ಮೈಸೂರಿನಲ್ಲಿ ಗೀತಕ್ಕ ಅವರಿಗೆ ಚಿತ್ರದ ಶೋರೀಲ್ ತೋರಿಸಿದೆ. ಅವರು ಖುಷಿಪಟ್ಟು ಶಿವಣ್ಣನವರಿಗೆ ತಿಳಿಸಿದರು. ಅವರಿಗೆ ಅವರ ಪಾತ್ರ ಮತ್ತು ಸನ್ನಿವೇಶದ ಬಗ್ಗೆ ಹೇಳಿದೆ. ಅವರು ಖುಷಿಯಿಂದ ಒಪ್ಪಿಕೊಂಡರು. ಅವರಂತಹ ಸ್ಟಾರ್ ನಟನನ್ನು ಯಕ್ಷಗಾನ ವೇಷದಲ್ಲಿ ನೋಡುವುದೇ ಖುಷಿ. ಅವರ ಪಾತ್ರ ಲೀಡ್ ರೋಲ್ ರೀತಿಯಲ್ಲೇ ಇರಲಿದೆ. ಜತೆಗೆ ಚಂದನ್ ಶೆಟ್ಟಿ, ಗರುಡ ರಾಮ್, ಪುನೀತ್ ಕೂಡ ನಟಿಸಿದ್ದಾರೆ.
* ಸದ್ಯ "ವೀರ ಚಂದ್ರಹಾಸ' ತೆರೆಗೆ ಬರಲು ರೆಡಿಯಿದೆ...
- ಕರಾವಳಿಯವರು ಯಕ್ಷಗಾನದ ಡೈಹಾರ್ಡ್ ಫ್ಯಾನ್ಗಳು. ಯಕ್ಷಗಾನ ಅಭಿಮಾನಿಗಳು, ಅದನ್ನು ಗೌರವಿಸುವವರು ಈ ಚಿತ್ರವನ್ನು ಮಿಸ್ ಮಾಡಲು ಸಾಧ್ಯವಿಲ್ಲ. ಜತೆಗೆ ನಮ್ಮ ಯಕ್ಷಗಾನವನ್ನು ಪ್ರಪಂಚಕ್ಕೆ ಪರಿಚಯಿಸುವ ಆಸೆ. ಅದಕ್ಕೆ ಎಲ್ಲ ಕನ್ನಡಿಗರು ಜತೆಯಾಗುತ್ತಾರೆ ಎಂಬ ನಂಬಿಕೆ ಇದೆ.
* ಮುಂದೆ?
- ಸದ್ಯಕ್ಕೆ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ, ಜೂ. ಎನ್ಟಿಆರ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದೇನೆ. ಜತೆಗೆ ವರ್ಷಕ್ಕೆ ಒಂದು ಸಿನಿಮಾ ನಿರ್ದೇಶಿಸುವ ಪ್ಲ್ಯಾನ್ ಇದೆ.