ಸಿನಿವಾಣಿ

'ಕೆಜಿಎಫ್​ 2' ಚಿತ್ರದಲ್ಲಿ ರವೀನಾ ಟಂಡನ್​ ಹೀಗೆ ಕಾಣ್ತಾರೆ ನೋಡಿ ...

ಬೆಂಗಳೂರು: ಯಶ್ ಅಭಿನಯದ ‘ಕೆಜಿಎಫ್​ 2’ ಚಿತ್ರದ ಒಂದು ವಿಶೇಷತೆ ಎಂದರೆ, ಅದರಲ್ಲಿ ರವೀನಾ ಟಂಡನ್ ನಟಿಸಿರುವುದು. ರವೀನಾ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ಹಲವು ವರ್ಷಗಳ ಹಿಂದೆ ಅವರು ಉಪೇಂದ್ರ ನಿರ್ದೇಶನದ 'ಉಪೇಂದ್ರ' ಚಿತ್ರದಲ್ಲಿ ನಟಿಸಿದ್ದರು. ಆ ನಂತರ 'ಕೆಜಿಎಫ್​ 2' ಚಿತ್ರದಲ್ಲಿ ನಟಿಸಿದ್ದ ಅವರು, ಲಾಕ್‌ಡೌನ್‌ಗಿಂಥ ಮುಂಚೆಯೇ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ, ಮುಂಬೈಗೆ ವಾಪಸ್ಸಾಗಿದ್ದಾರೆ.

ಆದರೆ, ಇದುವರೆಗೂ ರವೀನಾ ಅವರ ಪಾತ್ರವೇನು? ಚಿತ್ರದಲ್ಲಿ ಅವರು ಹೇಗೆ ಕಾಣುತ್ತಾರೆ? ಎಂಬ ವಿಷಯವನ್ನು ಚಿತ್ರತಂಡದವರು ಬಿಟ್ಟುಕೊಟ್ಟಿಲ್ಲ. ಇಂದು ರವೀನಾ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರಿಗೆ ಶುಭ ಕೋರುವುದರ ಜತೆಗೆ, ಅವರ ಫಸ್ಟ್​ ಲುಕ್​ ಬಿಡುಗಡೆ ಮಾಡಿದೆ ಚಿತ್ರತಂಡ.

ಈ ಚಿತ್ರದಲ್ಲಿ ರವೀನಾ ಅವರು ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೋಲುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಅದಕ್ಕೆ ಸರಿಯಾಗಿ ಕೆಲವು ತಿಂಗಳುಗಳ ಹಿಂದೆ ಮಾತನಾಡಿದ್ದ ಅವರು, ‘ಚಿತ್ರದಲ್ಲಿ ನಾನೊಬ್ಬ ರಾಜಕಾರಣಿಯ ಪಾತ್ರ ಮಾಡುತ್ತಿದ್ದೇನೆ. ಬಹಳ ಗಟ್ಟಿಯಾದ ಪಾತ್ರ ಅದು. ನಿಜ ಹೇಳಬೇಕೆಂದರೆ, ಚಿತ್ರದ ಹೀರೋ ಮತ್ತು ವಿಲನ್ ಎರಡೂ ಆ ಪಾತ್ರವೇ ಆಗಿರುತ್ತದೆ’ ಎಂದು ಹೇಳಿಕೊಂಡಿದ್ದರು.

‘ಕೆಜಿಎಫ್​ 2’ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದ್ದು, ಇನ್ನೂ ಕೆಲವು ದಿನಗಳ ಚಿತ್ರೀಕರಣ ಬಾಕಿ ಇದೆ. ಸಂಜಯ್​ ದತ್​ ಅಭಿನಯದ ಕೆಲವು ದೃಶ್ಯಗಳ ಚಿತ್ರೀಕರಣ ಬಾಕಿ ಇದ್ದು, ನವೆಂಬರ್​ನಲ್ಲಿ ಸಂಜಯ್​ ದತ್​ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಕೊಡಲಿದ್ದಾರೆ. ಈ ವಿಷಯವನ್ನು ಸ್ವತಃ ಸಂಜಯ್​ ದತ್​ ಅವರೇ ಇತ್ತೀಚೆಗೆ ಮುಂಬೈನಲ್ಲಿ ಮಾಧ್ಯಮದವರ ಎದುರು ಹೇಳಿಕೊಂಡಿದ್ದಾರೆ.

ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್​ ಮುಂತಾದವರು ನಟಿಸಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲಂಸ್‌ನಡಿ ವಿಜಯಕುಮಾರ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.