ಸಿನಿವಾಣಿ

ಚಿತ್ರರಂಗದ ಡರ್ಟಿ ಪಾಲಿಟಿಕ್ಸ್​ ಬಿಚ್ಚಿಟ್ಟ ರವೀನಾ ...

ಸುಶಾಂತ್​ ಸಿಂಗ್​ ರಜಪೂತ್​ ಅವರ ಸಾವು, ಬಾಲಿವುಡ್​ನಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರಮುಖವಾಗಿ ಕಲಾವಿದರುಗಳನ್ನು ಹೇಗೆಲ್ಲಾ ದೂರ ಇಡಲಾಗುತ್ತಿದೆ ಎಂಬುದರ ಕುರಿತು ಚರ್ಚೆಗಳಾಗುತ್ತಿದ್ದು, ಹಲವು ಕಲಾವಿದರು, ತಾವೆಷ್ಟು ಕಷ್ಟಪಡಬೇಕಾಯಿತು ಎಂಬ ತಮ್ಮ ಹಳೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಸಾಲಿಗೆ ಇದೀಗ ಮಸ್ತ್​ ಮಸ್ತ್​ ಹುಡುಗಿ ರವೀನಾ ಸಹ ಸೇರಿಕೊಂಡಿದ್ದಾರೆ.

ಸುಶಾಂತ್​ ಸಾವಿನ ನಂತರ ರವೀನಾ ಸಹ ಚಿತ್ರರಂಗದಲ್ಲಿ ಸ್ಟ್ರಗಲ್​ ಮಾಡುವುದು ಎಷ್ಟು ಕಷ್ಟ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಇಲ್ಲಿ ಹೀರೋಗಳು, ಅವರ ಗರ್ಲ್​ಫ್ರೆಂಡ್​ಗಳು, ಮಾಧ್ಯಮದವರು ... ಹೇಗೆಲ್ಲಾ ಒಬ್ಬ ಕಲಾವಿದನನ್ನು ತುಳಿಯುತ್ತಾರೆ ಎಂಬುದನ್ನು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಕಂಡಿದ್ದಾರೆ.

ಇಲ್ಲಿ ನಿಜಕ್ಕೂ ಬಣಗಳಿವೆ. ಯಾರಾದರೂ ತಮ್ಮ ತಾಳಕ್ಕೆ ಕುಣಿಯುವುದಿಲ್ಲ ಎಂದರೆ, ಅವರನ್ನು ತಮಾಷೆ ಮಾಡುವುದಷ್ಟೇ ಅಲ್ಲ, ಅವರನ್ನು ನಿರ್ದಯವಾಗಿ ಚಿತ್ರದಿಂದ ಕಿತ್ತು ಬಿಸಾಡಲಾಗುತ್ತದೆ. ಹೀರೋಗಳು, ಅವರ ಗರ್ಲ್​ಫ್ರೆಂಡ್​ಗಳು, ಅವರ ಚಮಚಾಗಳು ... ಸೇರಿ ಕೆರಿಯರ್​ ಹಾಳು ಮಾಡುತ್ತಾರೆ. ಕೆಲವರು ತಿರುಗಿ ಬೀಳುತ್ತಾರೆ. ಇನ್ನೂ ಕೆಲವರು ಇದೆಲ್ಲದರ ಗೊಡವೆಯೇ ಬೇಡ ಎಂದು ಸುಮ್ಮನಿದ್ದುಬಿಡುತ್ತಾರೆ ಎಂದು ರವೀನಾ ಬರೆದುಕೊಕಂಡಿದ್ದಾರೆ.

ಇಲ್ಲಿ ನಿಜ ಯಾರಿಗೂ ಬೇಡ ಎಂದು ಅಭಿಪ್ರಾಯಪಟ್ಟಿರುವ ಅವರು, ನಿಜ ಹೇಳಿದರೆ ಅವರನ್ನು ಹುಚ್ಚ, ಸುಳ್ಳ ಎಂದು ಬ್ರಾಂಡ್​ ಮಾಡಲಾಗುತ್ತದೆ. ಕೆಲವು ಮಾಧ್ಯಮದವರು ಅವರ ಬಗ್ಗೆ ಸುದೀರ್ಘವಾಗಿ ಸುದ್ದಿ ಮಾಡಿ, ಅವರ ಕೆರಿಯರ್​ ಹಾಳು ಮಾಡುತ್ತಾರೆ. ಇದೆಲ್ಲದರಿಂದ ಬಹಳ ಕಷ್ಟಪಟ್ಟು ರೂಪಿಸಿಕೊಂಡಿರುವ ಕೆರಿಯರ್​ ಹಾಳಾಗುತ್ತದೆ. ನಮ್ಮ ತಂದೆ ಸಹ ನಿರ್ದೇಶಕರಾಗಿದ್ದರು. ಆದರೆ, ನಾನು ಸಹ ಸಾಕಷ್ಟು ಸ್ಟ್ರಗಲ್​ ಮಾಡಿದ್ದೇನೆ. ಇವತ್ತು ಈ ಚಿತ್ರರಂಗ ನನಗೆಲ್ಲಾ ಕೊಟ್ಟಿದೆ. ಆದರೂ ಇಲ್ಲಿನ ಡರ್ಟಿ ಪಾಲಿಟಿಕ್ಸ್​ ಸಾಕಷ್ಟು ಬೇಸರ ತರಿಸಿದೆ ಎಂದು ರವೀನಾ ಟ್ವೀಟ್​ ಮಾಡಿದ್ದಾರೆ.