ಮುಂಬೈ: ಬಾಲಿವುಡ್ ನಟ ನಾಸಇರುದ್ದೀನ್ ಷಾ ಯಾವಾಗಲೂ ತಮ್ಮ ನೇರನುಡಿಗೆ ಜನಪ್ರಿಯರು. ತಮ್ಮ ಅಭಿಪ್ರಾಯಗಳನ್ನು ಯಾವುದೇ ಭಯವಿಲ್ಲದೆ ಹೇಳಿಕೊಳ್ಳುವ ಅವರು, ಅದಕ್ಕಾಗಿ ಸಾಕಷ್ಟು ಟೀಕೆಗಳನ್ನೂ ಎದುರಿಸಿದ್ದಾರೆ. ಅದೇ ಕಾರಣಕ್ಕೆ, ಇನ್ನು ಮುಂದೆ ಹೆಚ್ಚು ಮಾತನಾಡಬೇಡಿ ಎಂದು ನಾಸಿರುದ್ದೀನ್ ಷಾಗೆ ಅವರ ಪತ್ನಿ ತಾಕೀತು ಮಾಡಿದ್ದಾರಂತೆ.
ಇದನ್ನೂ ಓದಿ: ಹೊಸ ವರ್ಷದ ಮೊದಲ ಶುಕ್ರವಾರ ಎಂಟು ಚಿತ್ರಗಳ ಬಿಡುಗಡೆ …
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ರತ್ನಾ ಪಾಠಕ್ ಷಾ, 'ಮೊದಲಿನಂತೆ ಈಗ ಕೆಲಸಗಳು ಸಿಗುತ್ತಿಲ್ಲ. ಹಾಗಾಗಿ, ನಾವು ಸ್ವಲ್ಪ ಸೆನ್ಸಿಬಲ್ ಆಗಿ ಯೋಚಿಸಬೇಕು. ಅವರೇನೋ ತಪ್ಪು ಮಾತಾಡಿಲ್ಲ. ಹಾಗಾಗಿ, ಭಯ ಪಡಬೇಕಿಲ್ಲ. ನಾವು ಮಾತನಾಡಲಿಲ್ಲ ಎಂದರೆ ತಪ್ಪುಗಳನ್ನು ತೋರಿಸುವುದು ಯಾರು? ತಪ್ಪುಗಳನ್ನು ಎತ್ತಿ ಹೇಳದಿದ್ದರೆ, ಈ ಜಗತ್ತು ಬದಲಾಗುವುದಕ್ಕೆ ಹೇಗೆ ಸಾಧ್ಯ? ಆದರೆ, ಹಾಗೆ ಮಾತನಾಡುವುದರಿಂದ ಬೇರೆ ತರಹದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾರೋ ಮನೆ ಎದುರು ಬಂದು ಕಲ್ಲು ಹೊಡೆಯಬಹುದು' ಎಂದು ಹೇಳಿದ್ದಾರೆ ರತ್ನಾ.
ಹಾಗಾಗಿ, ತಮ್ಮ ಪತಿಗೆ ಹೆಚ್ಚು ಮಾತನಾಡಬೇಡಿ ಎಂದು ಹೇಳಿದ್ದಾರಂತೆ ರತ್ನಾ. ಬಹಿರಂಗವಾಗಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಡಿ ಎಂದು ಹೇಳಿದ್ದಾರಂತೆ. ಅದೇ ಕಾರಣಕ್ಕೆ ಇತ್ತೀಚೆಗೆ ನಾಸಿರುದ್ದೀನ್ ಷಾ ಎಲ್ಲೂ ಹೆಚ್ಚು ಮಾತನಾಡಿಲ್ಲ. ಹಾಗೆಯೇ ಯಾವುದೇ ವಿವಾದಕ್ಕೂ ಸಿಲುಕಿಲ್ಲ ಎಂಬುದು ವಿಶೇಷ.
ಇಷ್ಟು ವರ್ಷಗಳಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿರುವ ರತ್ನಾ, ಇದೇ ಮೊದಲ ಬಾರಿ ಗುಜರಾತಿ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅದೇ 'ಕಛ್ ಎಕ್ಸ್ಪ್ರೆಸ್'. ಇನ್ನೊಂದು ಕಡೆ ನಾಸಿರುದ್ದೀನ್ ಷಾ, 'ಕುತ್ತೇ' ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.