ರಶ್ಮಿಕಾ ಮಂದಣ್ಣ ಸಿನಿಮಾ ರಂಗಕ್ಕೆ ಬಂದದ್ದು 2017ರಲ್ಲಿ. ಅಂದರೆ ಬರೋಬ್ಬರಿ ಏಳು ವರ್ಷದ ಹಿಂದೆ. ಕನ್ನಡ ಸಿನಿಮಾಗಳ ನಂತರ ಈಗ ತೆಲುಗಿನಲ್ಲಿ ಬಲು ಬೇಡಿಕೆಯ ನಟಿ. ಅಷ್ಟೇಯಲ್ಲ, ಬಾಲಿವುಡ್ ನಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ಹೀರೋಯಿನ್. ಹಾಗಾಗಿ ರಶ್ಮಿಕಾ ಮಂದಣ್ಣ ಆಸ್ತಿ ಕೂಡ ಅವರ ಜನಪ್ರಿಯತೆಯಂತೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ.
ವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ‘ಅಂಜನೀಪುತ್ರ’ ಸಿನಿಮಾದಲ್ಲಿ ರಶ್ಮಿಕಾ 2017ನೇ ಇಸವಿಯಲ್ಲಿ ನಟಿಸಿದ್ದರು. 2018ನೇ ಇಸವಿಯಲ್ಲಿ ರಕ್ಷಿತ್ ಶೆಟ್ಟಿ ಜೊತೆ ‘ಕಿರಿಕ್ ಪಾರ್ಟಿ’ ಚಿತ್ರ ಮಾಡಿದರು. ಎರಡರಲ್ಲೂ ರಶ್ಮಿಕಾಗೆ ಒಳ್ಳೆಯ ಹೆಸರು ಬಂತು. ಜೊತೆಗೆ ತೆಲುಗು ಚಿತ್ರರಂಗ ಕೈಬೀಸಿ ಕರೆಯಿತು. ಅದೇ ವರ್ಷ ತೆಲುಗಿನ ‘ಗೀತಾ ಗೋವಿಂದಂ’ ನಾಯಕಿಯಾದರು. 2019ನೇ ಇಸವಿಯಲ್ಲಿ ‘ಯಜಮಾನ’, ‘ಡಿಯರ್ ಕಾಮ್ರೇಡ್’, 2020ನೇ ಇಸವಿಯಲ್ಲಿ ‘ಸರಿಲೆರು ನಿಕೇವ್ವರು’, ‘ಭೀಷ್ಮ’ 2021ನೇ ಇಸವಿಯಲ್ಲಿ ‘ಪೊಗರು’ ಸಿನಿಮಾಗಳಲ್ಲಿ ನಟಿಸಿದರು. ನಂತರ ತಮಿಳಿಗೂ ಎಂಟ್ರಿ ಕೊಟ್ರು.
ಒಂದು ರೇಂಜಿಗೆ ಹಿಟ್ ಆದ ಸಿನಿಮಾಗಳಾದರೆ ನಂತರ ಬಂದ ‘ಪುಷ್ಪಾ ಡಿ ರೈಸ್’ ರಶ್ಮಿಕಾ ಮಂದಣ್ಣ ಅವರನ್ನು ಇನ್ನೊಂದು ಲೆವೆಲ್ ಗೆ ಕೊಂಡೊಯ್ಯಿತು. ಜೊತೆಗೆ ಬಾಲಿವುಡ್ ಕರೆಯೂ ಬಂತು. ರಣಬೀರ್ ಕಪೂರ್ ಜೊತೆ ‘ಅನಿಮಲ್’ ಸಿನಿಮಾ ಮಾಡಿದರು. ‘ಪುಷ್ಪಾ-2’ ಡಿಸಂಬರ್ 5ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ 10 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಸದ್ಯ ರಶ್ಮಿಕಾ ಮಂದಣ್ಣ ಅವರು ಸಲ್ಮಾನ್ ಖಾನ್ ಅವರ ‘ಸಿಕಂದರ್’ ಸಿನಿಮಾಕ್ಕೆ ನಾಯಕಿಯಾಗಿ ನಟಿಸುತ್ತಿದ್ದು 13 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಇನ್ನು ಮೂರು ವರ್ಷ ಇನ್ನಿಲ್ಲದಷ್ಟು ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಅವರ ಒಟ್ಟು ಆಸ್ತಿ 50 ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ.