ಮುಂಬೈ: ಕನ್ನಡಿಗರಿಗೆ ನಟಿ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷವಾಗಿ ಏನೂ ಹೇಳಬೇಕಿಲ್ಲ. ನ್ಯಾಷನಲ್ ಕ್ರಶ್ ಆಗಿ ಹುಡುಗರ ಮನ ಕದ್ದಿರುವ ಈ ಚೆಲುವೆ, ಸಾಲು ಸಾಲು ಸಿನಿಮಾಗಳಿಂದ ಸದ್ದು ಮಾಡುತ್ತಿದ್ದಾರೆ. ಒಂದೆಡೆ ಟಾಲಿವುಡ್‌ನಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಲೇ ಮತ್ತೊಂದೆಡೆ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ರಣಬೀರ್ ಕಪೂರ್ ಅಭಿನಯದ ಅನಿಮಲ್ ಚಿತ್ರದ ಬ್ಲಾಕ್ ಬಸ್ಟರ್ ನಂತರ ರಶ್ಮಿಕಾಗೆ ಬಾಲಿವುಡ್ನಿಂದ ಸಿಕ್ಕಾಪಟ್ಟೆ ಆಫರ್ಗಳು ಬರುತ್ತಿವೆ. ಇದೀಗ ರಶ್ಮಿಕಾ ಸಂಬಂಧಿಸಿದ ಸುದ್ದಿಯೊಂದು ಸಿನಿ ಇಂಡಸ್ಟ್ರಿಯಲ್ಲಿ ವೈರಲ್ ಆಗಿದೆ. ಈವರೆಗೂ ತನ್ನ ಸೌಂದರ್ಯದಿಂದ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದ ಈ ಚಸ್ಮಾ ಸುಂದರಿ ಸದ್ಯದಲ್ಲೇ ಪ್ರೇಕ್ಷಕರನ್ನು ಹೆದರಿಸಲು ತಯಾರಾಗುತ್ತಿದ್ದಾರಂತೆ. ಹೌದು, ರಶ್ಮಿಕಾ ಹಾರರ್ ಸಿನಿಮಾದಲ್ಲಿ ನಟಿಸಲಿದ್ದಾರೆ.
ಪ್ರಸ್ತುತ ಬಾಲಿವುಡ್‌ನಲ್ಲಿ ಹಾರರ್ ಸಿನಿಮಾಗಳ ಟ್ರೆಂಡ್ ಇದೆ. ಕೊಂಚ ನಗುವಿನ ಜತೆಗೆ ಭಯವಿದ್ದರೆ ಸಾಕು ಪ್ರೇಕ್ಷಕರಿಂದ ಕಲೆಕ್ಷನ್ ಸುರಿಮಳೆಯಾಗುತ್ತದೆ. ಇದಕ್ಕೆ ಇತ್ತೀಚಿನ ಸಿನಿಮಾಗಳೇ ಸಾಕ್ಷಿ. ಅಜಯ್ ದೇವಗನ್ ನಟನೆಯ ಸೈತಾನ್, ಅಭಯ್ ವರ್ಮ ಅಭಿನಯದ ಮುಂಜ್ಯಾ ಹಾಗೂ ಇತ್ತೀಚಿಗೆ ಬಿಡುಗಡೆಯಾದ ಸ್ತ್ರೀ 2 ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿವೆ. ಇದೀಗ ರಶ್ಮಿಕಾ, ಇದೇ ಜಾನರ್ನಲ್ಲಿ ಸಿನಿಮಾ ಮಾಡಲಿದ್ದಾರೆ. ವ್ಯಾಂಪೈರ್ಸ್ ಆಫ್ ವಿಜಯನಗರ ಎಂಬ ಹಾರರ್ ಡ್ರಾಮಾ ತಯಾರಾಗುತ್ತಿದೆ. ಈ ಚಿತ್ರವನ್ನು ಆದಿತ್ಯ ಸರ್ಪೋಧರ್ ನಿರ್ದೇಶಿಸಿದ್ದಾರೆ. ವಿಜಯನಗರದ ಇತಿಹಾಸದ ಹಿನ್ನೆಲೆಯಲ್ಲಿ ಈ ಕಥೆ ಹಂಪಿಯ ಸುತ್ತ ಸುತ್ತುತ್ತದೆ.
14ನೇ ಶತಮಾನದ ವಿಜಯನಗರದ ಇತಿಹಾಸದಿಂದ ಆರಂಭವಾಗಿ ಇಂದಿನವರೆಗೆ ವಿವಿಧ ಕಾಲಘಟ್ಟಗಳ ಕಥೆಯನ್ನು ಇದರಲ್ಲಿ ತೋರಿಸಲು ಚಿತ್ರತಂಡ ಹೊರಟಿದೆ. ವಿಭಿನ್ನ ಶೇಡ್ ಇರುವ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಆಯುಷ್ಮಾನ್ ಖುರಾನ್ ನಾಯಕನಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರದ ಶೂಟಿಂಗ್ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆಯಂತೆ.
ರಶ್ಮಿಕಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ರಶ್ಮಿಕಾ ಅಭಿನಯದ ಪುಷ್ಪ 2 ಮತ್ತು ಚವಾ ಒಂದೇ ದಿನ ಬಿಡುಗಡೆಯಾಗುತ್ತಿದೆ. ಇವರೊಂದಿಗೆ ಧನುಷ್ ನಟನೆಯ 'ಕುಬೇರ' ಚಿತ್ರದಲ್ಲೂ ನಟಿಸುತ್ತಿದ್ದಾರೆ. ರಾಹುಲ್ ರವೀಂದ್ರನ್ ಅವರ ದಿ ಗರ್ಲ್‌ಫ್ರೆಂಡ್ ಕೂಡ ಈ ವರ್ಷಕ್ಕೆ ಬಿಡುಗಡೆಯಾಗಲಿದೆ. ಇಲ್ಲಿಯವರೆಗೂ ತನ್ನ ಸೌಂದರ್ಯದಿಂದಲೇ ಮೋಡಿ ಮಾಡಿದ್ದ ರಶ್ಮಿಕಾ ಮೊನ್ನೆಯಷ್ಟೇ ಪ್ರೇಕ್ಷಕರನ್ನು ಹೆದರಿಸಲು ರೆಡಿಯಾಗುತ್ತಿದ್ದಾರೆ. (ಏಜೆನ್ಸೀಸ್)