ಕೊಡಗು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಆದಾಯ ತೆರಿಗೆ (ಐಟಿ) ದಾಳಿ ನಡೆದಿದ್ದು, ಗುರುವಾರ ಮುಂಜಾನೆಯಿಂದ ವಿರಾಜಪೇಟೆ- ಮಡಿಕೇರಿ ಮಾರ್ಗದ ಕುಕ್ಲೂರು ಗ್ರಾಮದಲ್ಲಿರುವ ಮನೆಯಲ್ಲಿ ಐಟಿ ಶೋಧಾ ಮುಂದುವರಿದಿದೆ.
ಬೆಂಗಳೂರಿನಿಂದ ಮೂರು ಬಾಡಿಗೆ ವಾಹನದಲ್ಲಿ ಆಗಮಿಸಿದ 15 ಜನರ ತಂಡ ಪರಿಶೀಲನೆ ಮಾಡುತ್ತಿದೆ. ಮುಂಜಾನೆ 7.30 ರಿಂದ ಕಾರ್ಯಾಚರಣೆ ಪ್ರಾರಂಭವಾಗಿದೆ. ಐಟಿ ದಾಳಿ ವೇಳೆ ಮನೆಯಲ್ಲಿ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಮತ್ತು ತಂದೆ ಮದನ್ ಮಂದಣ್ಣ ಮಾತ್ರ ಇದ್ದರು.
ಮದನ್ ಮಂದಣ್ಣ ವಿರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾಗಿದ್ದಾರೆ. ಮದನ್ ಮಂದಣ್ಣ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರೊಂದಿಗೆ ಒಡನಾಟ ಹೊಂದಿದ್ದಾರೆ ಎನ್ನಲಾಗಿದೆ. ಆ ಕಾರಣಕ್ಕಾಗಿ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.