ಲಾಕ್ಡೌನ್ ಶುರುವಾದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಚಾಲೆಂಜ್ಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಸ್ತ್ರೀಯರಂತೂ ಸೀರೆ ಚಾಲೆಂಜ್, ಹೇರ್ಸ್ಟೈಲ್ ಚಾಲೆಂಜ್ ಎಂದು ನೆಚ್ಚಿನ ಸ್ನೇಹಿತರಿಗೆ, ಕುಟುಂಬಸ್ಥರಿಗೆ ವರ್ಗಾಯಿಸುತ್ತಿದ್ದಾರೆ. ಅದೇ ರೀತಿ ‘ಸೌಥ್ ಸೆನ್ಸೆಷನ್’ ಎಂದೇ ಕರೆಸಿಕೊಳ್ಳುವ ನಟಿ ರಶ್ಮಿಕಾ ಮಂದಣ್ಣ, ಕೂರ್ಗಿ ಶೈಲಿಯ ಸೀರೆ ತೊಟ್ಟು ಸಂಭ್ರಮಿಸಿದ್ದಾರೆ.
ಹಾಗಂತ ಅವರು ಯಾರಿಂದಲೂ ಚಾಲೆಂಜ್ ಸ್ವೀಕರಿಸಿಲ್ಲ. ಅದನ್ನು ಯಾರಿಗೂ ವರ್ಗಾವಣೆ ಮಾಡಿಲ್ಲ. ಅಮ್ಮನ ಖುಷಿಗೋಸ್ಕರ ಸೀರೆ ತೊಟ್ಟಿದ್ದಾರೆ. ಬಂಗಾರದ ವರ್ಣದ ಅಂಚಿನ ಹಸಿರು ಬಣ್ಣದ ಸೀರೆಯನ್ನು ಧರಿಸಿ ಫೋಟೋಗೆ ಪೋಸ್ ಕೊಟ್ಟಿರುವ ರಶ್ಮಿಕಾ, ಆ ಸೀರೆ ತೊಡುವ ಪ್ರಹಸನವನ್ನೂ ಹಾಸ್ಯಮಯವಾಗಿ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
‘ನೀನು ಇಲ್ಲ ಎನ್ನುವ ಮಾತೇ ಇಲ್ಲ. ಕೊಡವ ಶೈಲಿಯಲ್ಲಿ ಸೀರೆ ತೊಡಲೇಬೇಕು ...’ ಎಂದು ಅಮ್ಮ ಕೇಳಿದಾಗ, ಅದಕ್ಕೆ ಮೊದಲಿಗೆ ಇಲ್ಲ, ತೊಡಲ್ಲ ಎಂದು ಹೇಳಿ ಆ ಬಳಿಕ ಸೀರೆಯುಟ್ಟು ಎದುರಾಗಿದ್ದಾರೆ ರಶ್ಮಿಕಾ. ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರ ಏನೆಂದರೆ, ರಶ್ಮಿಕಾಗಿರುವ ಪೆಟ್ ನೇಮ್ ಏನು? ಅವರ ಮನೆಯಲ್ಲಿ ಏನೆಂದು ಕರೆಯುತ್ತಾರೆ? ಎಂಬ ಗುಟ್ಟೂ ಹೊರಬಿದ್ದಿದೆ. ರಶ್ಮಿಕಾಗೆ ಅವರ ಮನೆಯಲ್ಲಿ ಮೋನಿ ಎಂಬ ಹೆಸರಿನಿಂದ ಕರೆಯುತ್ತಾರೆ. ಅದನ್ನು ಸ್ವತಃ ಅವರೇ ಜಾಲತಾಣದಲ್ಲಿ ಹೇಳಿ ಕೊಂಡಿದ್ದಾರೆ.