ಸಿನಿವಾಣಿ

ವಿಜಯ್ ದೇವರಕೊಂಡ ಜತೆಗಿನ ನಿಶ್ಚಿತಾರ್ಥ ಸುದ್ದಿಯ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಇನ್​ಸ್ಟಾ ಪೋಸ್ಟ್​ ವೈರಲ್​! Rashmika Mandanna

Rashmika Mandanna : ಸ್ಟಾರ್​ ಕಲಾವಿದರಾದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸುಮಾರು ಆರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ತಾರಾ ಜೋಡಿ ಕೊನೆಗೂ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಮದುವೆ ಮುನ್ಸೂಚನೆಯಾಗಿ ಅ. 3ರ ಶುಕ್ರವಾರದಂದು ಇಬ್ಬರ ನಿಶ್ಚಿತಾರ್ಥವು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಾತ್ರ ರಹಸ್ಯವಾಗಿ ನಡೆದಿದೆ ಎಂಬ ಸುದ್ದಿ ಕಾಲಿವುಡ್​ ಗಲ್ಲಿಯಲ್ಲಿ ಹರಿದಾಡುತ್ತಿದೆ. ಆದರೆ, ಈ ವಿಚಾರವಾಗಿ ರಶ್ಮಿಕಾ ಆಗಲಿ, ವಿಜಯ್​ ದೇವರಕೊಂಡ ಆಗಲಿ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅಲ್ಲದೆ, ಈ ಸುದ್ದಿಗಳನ್ನು ನಿರಾಕರಿಸುವ ಯಾವುದೇ ಘೋಷಣೆಯನ್ನೂ ಹೊರಡಿಸಿಲ್ಲ. ಇದೀಗ ಈ ಸುದ್ದಿ ನಿಜವೆಂದು ತೋರುತ್ತಿದ್ದು, 2026ರಲ್ಲಿ ಈ ಜೋಡಿ ಮದುವೆಯಾಗಲಿದೆ ಎಂದು ವರದಿಯಾಗಿದೆ.

ಮದುವೆಗಳಿಗೆ ಶುಭವೆಂದು ಪರಿಗಣಿಸಲಾದ ಮಾಘ ಮಾಸದಲ್ಲಿ ರಶ್ಮಿಕಾ-ವಿಜಯ್​ ಮದುವೆ ನಡೆಸಲು ಕುಟುಂಬ ಸದಸ್ಯರು ದೃಢನಿಶ್ಚಯ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವುದರ ನಡುವೆ ರಶ್ಮಿಕಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಎರಡು ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ಒಂದು ಪೋಸ್ಟ್​ನಲ್ಲಿ ರಶ್ಮಿಕಾ ಸಾಂಪ್ರದಾಯಿಕ ಸೀರೆಯುಟ್ಟು ಕ್ಯಾಮೆರಾಗೆ ಪೋಸ್​​ ನೀಡಿದ್ದಾರೆ.

ಮತ್ತೊಂದು ಪೋಸ್ಟ್​ನಲ್ಲಿ ನೀವೆಲ್ಲರೂ ಇದಕ್ಕಾಗಿ ಕಾಯುತ್ತಿದ್ದೀರಿ ಎಂದು ನನಗೆ ತಿಳಿದಿದೆ ಎಂದು ಹೇಳುವ ಕುತೂಹಲಕಾರಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆದಾಗ್ಯೂ, ಈ ಪೋಸ್ಟ್​ ಅವರ ಮುಂದಿನ ಚಿತ್ರ "ದಿ ಗರ್ಲ್‌ಫ್ರೆಂಡ್" ಬಿಡುಗಡೆ ದಿನಾಂಕದ ಬಗ್ಗೆ. ಆದರೆ, ಬಹಳ ದಿನಗಳಿಂದ ಮದುವೆ ಘೋಷಣೆಗಾಗಿ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ. ನಿಶ್ಚಿತಾರ್ಥದ ಬಗ್ಗೆ ಏನಾದರೂ ಪೋಸ್ಟ್​ ಮಾಡುತ್ತಾರಾ ಎಂದು ಕಾದು ಕುಳಿತಿದಿದ್ದಾರೆ. ಆದರೂ, ಈ ಎರಡು ಪೋಸ್ಟ್​ಗಳನ್ನು ಮದುವೆ ಬಗ್ಗೆ ಸುಳಿವು ನೀಡಲೆಂದೇ ಪೋಸ್ಟ್ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ, ಕಾಮೆಂಟ್​ ಬಾಕ್ಸ್​ನಲ್ಲಿ ಹ್ಯಾಪಿ ಎಂಗೇಜ್​ಮೆಂಟ್​ ಅಂತ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ಇನ್ನು ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಅವರ ಚಿತ್ರಗಳ ಬಗ್ಗೆ ಹೇಳುವುದಾದರೆ, ವಿಜಯ್ ಅವರು ಪ್ರಸ್ತುತ "ರೌಡಿ ಜನಾರ್ದನ" ಎಂಬ ಮಾಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರವಿ ಕಿರಣ್ ಕೋಲಾ ನಿರ್ದೇಶಿಸುತ್ತಿದ್ದಾರೆ ಮತ್ತು ದಿಲ್ ರಾಜು ನಿರ್ಮಿಸುತ್ತಿದ್ದಾರೆ. ರಶ್ಮಿಕಾ ಅವರ ಮುಂದಿನ ಚಿತ್ರ "ದಿ ಗರ್ಲ್‌ಫ್ರೆಂಡ್. ಈ ಸಿನಿಮಾವನ್ನು ನಿರ್ದೇಶಕ ರಾಹುಲ್ ರವೀಂದ್ರನ್ ನಿರ್ದೇಶಿಸಿದ್ದಾರೆ. ಮಹಿಳಾ ಪ್ರಧಾನ ಪರಿಕಲ್ಪನೆಯೊಂದಿಗೆ ಬರುವ ಈ ಚಿತ್ರ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)