ಸಿನಿವಾಣಿ

'ಅನ್ನಪೂರ್ಣ'ರಾದ ನಟಿ ರಶ್ಮಿಕಾ ಮಂದಣ್ಣ; 400 ಕುಟುಂಬ ದತ್ತು, ಒಂದು ವರ್ಷದವರೆಗೆ ದಿನಸಿ ಖರ್ಚು ಭರಿಸುವ ಭರವಸೆ!..Rashmika Mandanna

  • ಒಟ್ಟು 400 ಕುಟುಂಬಗಳನ್ನು ದತ್ತು ಪಡೆದಿರುವುದಾಗಿ ನಟಿ ರಶ್ಮಿಕಾ ಮಂದಣ್ಣ ಮಾಹಿತಿ

  • 400 ಕುಟುಂಬಗಳಿಗೆ 3 ತಿಂಗಳ ಕಾಲ ದಿನಸಿ ವೆಚ್ಚ ಭರಿಸುವುದಾಗಿ ತಿಳಿಸಿದ ರಶ್ಮಿಕಾ

  • ದಿನಸಿಗೆ ತಗಲುವ ಹಣವನ್ನು ಕುಟುಂಬಕ್ಕಾಗಿ ವ್ಯಯಿಸಬೇಕು ಎನ್ನುವುದು ನಟಿಯ ಆಶಯ

Rashmika Mandanna adopts 400 families: ನಟನಾ ಶೈಲಿ, ನಗುವಿಗೆ ಮೆಚ್ಚುಗೆಯಾಗುವ ರಶ್ಮಿಕಾ ಮಂದಣ್ಣ ಸದ್ಯ ಎಲ್ಲರ ಮನ ಗೆದ್ದಿದ್ದಾರೆ. ಮದುವೆ ಸಮಯದಲ್ಲಿ ಹೈದರಾಬಾದ್​​ ಸುತ್ತಮುತ್ತ ಅನ್ನದಾನ ಸೇರಿದಂತೆ ಸಾಕಷ್ಟು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಿದ್ದ ಅವರು, ಈಗ 400 ಕುಟುಂಬಗಳನ್ನು ದತ್ತು ಪಡೆದುಕೊಂಡಿದ್ದಾರೆ.

ಅ.16ರಂದು ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ ದಂಪತಿ ನಟನೆಯ ರಣಬಾಲಿ ಸಿನಿಮಾ ರಿಲೀಸ್​ ಆಗಲು ಸಜ್ಜಾಗಿದೆ. ರಾಹುಲ್​ ಸುಕೃತನ್​ ನಿರ್ದೇಶನದ ಈ ಸಿನಿಮಾದ ನಿರ್ಮಾಣದ ಹೊಣೆಯನ್ನು ಮೈತ್ರಿ ಮೂವಿ ಮೇಕರ್ಸ್​ ಹೊತ್ತಿದೆ. ಈ ಸಿನಿಮಾ ಪ್ರಚಾರದ ಜೊತೆ ಜೊತೆಗೆ ರಶ್ಮಿಕಾ ಅವರು ಅನ್ನಪೂರ್ಣ ಎಂಬ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ. ಆ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ರಶ್ಮಿಕಾ ಪೋಸ್ಟ್​ನಲ್ಲಿ ಏನಿದೆ?

ರಶ್ಮಿಕಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​ ಪ್ರಕಾರ, 'ಪ್ರತಿಬಾರಿ ನೀವು ಪ್ರಶ್ನೆ ಮಾಡುತ್ತಲೇ ಇರುತ್ತೀರಿ. ನೀವು ತೆರೆ ಮೇಲೆ ನಿರ್ವಹಿಸುವ ಪಾತ್ರಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತದೆಯೇ ಎಂದು. ಜೊತೆಗೆ 'ಜಯಮ್ಮ' ಪಾತ್ರಕ್ಕೂ ನನಗೂ ಏನಾದರೂ ಸಾಮ್ಯವಿದೆಯೇ ಎಂದು ಅನೇಕರು ಕೇಳುತ್ತಿರುತ್ತೀರಿ. ಹೌದು ಇದೆ'.

'ನೀವು ನೀಡುವ ಪ್ರೀತಿಗೆ ಬದಲಾಗಿ ನಾನು ಯಾವಾಗಲೂ ಇಂತಹ ಕೆಲಸಗಳನ್ನು ಮಾಡುತ್ತಿದ್ದೆ. ಆದರೆ ಅದು ನನಗೆ, ನನ್ನ ತಂಡಕ್ಕೆ ಮತ್ತು ಕೆಲವರಿಗೆ ಮಾತ್ರ ತಿಳಿದಿದ್ದರೆ ಸಾಕು ಎಂದು ರಹಸ್ಯವಾಗಿಟ್ಟಿದ್ದೆ. ಆದರೆ ಈಗ ಇದನ್ನೂ ಬಹಿರಂಗಪಡಿಸುವ ಕಾಲ ಬಂದಿದೆ. ಏಕೆಂದರೆ, ನಿಮ್ಮಲ್ಲಿ ಇಂತಹ ಒಳ್ಳೆಯ ಕೆಲಸ ಆರಂಭಿಸಲು ಪ್ರೇರೇಪಿಸುತ್ತದೆ' ಎಂದರು.

ದಿನಸಿಗೆ ಭರಿಸುವ ವೆಚ್ಚ ಕಡಿಮೆಯಾಗುತ್ತದೆ

ಹೀಗಾಗಿ, 'ಇಂದು ನಾನು 400 ಕುಟುಂಬಗಳನ್ನು ದತ್ತು ಪಡೆದಿದ್ದೇನೆ. ಏಕಕಾಲದಲ್ಲಿ 400 ಕುಟುಂಬಗಳಿಗೆ 3 ತಿಂಗಳವರೆಗೆ ನೆರವು ನೀಡಲು ಬಯಸುತ್ತೇನೆ ಮತ್ತು ಇದನ್ನು ಮುಂದಿನ ಒಂದು ವರ್ಷದವರೆಗೆ ಮುಂದುವರಿಸುತ್ತೇನೆ' ಎಂದಿದ್ದಾರೆ

'ದಿನಸಿಗೆ ತಗಲುವ ಹಣವನ್ನು ಉಳಿಸಿ, ಆ ಹಣವನ್ನು ತಮ್ಮ ಭವಿಷ್ಯದ ಉಳಿತಾಯ ಮತ್ತು ಯೋಜನೆಗಳಿಗೆ ಬಳಸಿಕೊಳ್ಳಬಹುದು ಎಂದು ಆಶಿಸುತ್ತೇನೆ. ಇಂತಹ ಸಣ್ಣ ಸತ್ಕಾರ್ಯಗಳು ಮುಂದೆ ಯಾರದ್ದೋ ಜೀವನವನ್ನು ಬದಲಾಯಿಸಬಹುದು. ಎಲ್ಲವೂ ದೊಡ್ಡ ಸಹಾಯವೇ ಆಗಿರಬೇಕಿಲ್ಲ. ನನ್ನ ವೃತ್ತಿಜೀವನದಲ್ಲಿ ಎದುರಾದ ಕಷ್ಟಗಳು, ನಿದ್ರೆ ಇಲ್ಲದ ರಾತ್ರಿಗಳು, ನೋವು ಮತ್ತು ಕಣ್ಣೀರನ್ನು ಮೆಟ್ಟಿ ನಿಂತು ಈ ಕುಟುಂಬಗಳ ಮುಖದಲ್ಲಿ ಕಾಣುವ ನಗು ಎಲ್ಲವನ್ನೂ ಮರೆಸುತ್ತದೆ' ಎಂದು ಬರೆದುಕೊಂಡಿದ್ದಾರೆ.

ದಂಪತಿ ಒಟ್ಟಾಗಿ ನಟಿಸುತ್ತಿರುವ ಸಿನಿಮಾ

ರಶ್ಮಿಕಾ ಮಂದಣ್ಣ ಅವರು ತಮ್ಮ ಪತಿ-ನಟ ವಿಜಯ್ ದೇವರಕೊಂಡ ಅವರೊಂದಿಗೆ 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ನಟಿಸಿದ್ದರು. 'ರಣಬಾಲಿ' ಮೂರನೇ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಚಿತ್ರವಾಗಿದೆ, (ಏಜೆನ್ಸೀಸ್).