ಸಿನಿವಾಣಿ

ಪೀಲಿಂಗ್ಸ್​ ಸಾಂಗ್​ಗಾಗಿ ರಶ್ಮಿಕಾಗೆ ನರಕ ತೋರಿಸಲಾಗಿದೆ! ಕೇಳಿಬಂತು ಗಂಭೀರ ಆರೋಪ | Rashmika Mandanna

Rashmika Mandanna : ಐಕಾನ್​ ಸ್ಟಾರ್ ಅಲ್ಲು ಅರ್ಜುನ್​ ನಟನೆಯ ಪುಷ್ಪ-2 ಸಿನಿಮಾ ಬಿಡುಗಡೆಯಾದ ದಿನದಿಂದ ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಿದೆ. ಸಂಧ್ಯಾ ಚಿತ್ರಮಂದಿರದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದ ಬಳಿಕ ಪುಷ್ಪ ಸಿನಿಮಾ ಹೆಚ್ಚು ಟೀಕೆಗಳಿಗೆ ಗುರಿಯಾಗಿದೆ. ಅದರಲ್ಲೂ ಅಲ್ಲು ಅರ್ಜುನ್​ ಬಂಧನವಾಗಿ ಬಿಡುಗಡೆಯಾದ ಬಳಿಕ ಇಡೀ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಅಲ್ಲು ಅರ್ಜುನ್​ ಬಂಧನದ ಹಿಂದೆ ಸಿಎಂ ರೇವಂತ್​ ರೆಡ್ಡಿ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತು. ಆದರೆ, ಇದನ್ನು ಸಿಎಂ ಅಲ್ಲಗೆಳೆದರು. ಇಷ್ಟಕ್ಕೆ ಸುಮ್ಮನಾಗಿದ್ದರೆ ವಿವಾದ ತಣ್ಣಗಾಗುತ್ತಿತ್ತು. ಆದರೆ, ಅಲ್ಲು ಅರ್ಜುನ್​ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಮತ್ತು ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಸಿಎಂ ಕೂಡ ಇದಕ್ಕೆ ತಿರುಗೇಟು ನೀಡಿದರು. ನಟರಾದವರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕೆಂದರು. ಇದರ ನಡುವೆ ಮೊನ್ನೆ ಅಲ್ಲು ಅರ್ಜುನ್​ ಮನೆ ಮೇಲೆ ಕಲ್ಲು ತೂರಾಟವು ನಡೆದಿತ್ತು. ಕಾಂಗ್ರೆಸ್​ ಕಾರ್ಯತರು ಈ ರೀತಿ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

ಇದರ ಬೆನ್ನಲ್ಲೇ ಸಾಕಷ್ಟು ರಾಜಕೀಯ ನಾಯಕರು ಪುಷ್ಪ-2 ಸಿನಿಮಾದ ವಿರುದ್ಧ ಬಹಿರಂಗವಾಗಿಯೇ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಕೆ.ನಾರಾಯಣ ಅವರು ಪುಷ್ಪ ಸಿನಿಮಾದ ವಿರುದ್ಧ ಹರಿಹಾಯ್ದಿದ್ದಾರೆ. ಅದರಲ್ಲೂ ನಟಿ ರಶ್ಮಿಕಾ ಮಂದಣ್ಣರ ಹೆಸರನ್ನು ಉಲ್ಲೇಖಿಸಿ ತೀವ್ರ ಟೀಕೆ ಮಾಡಿದ್ದಾರೆ.

ಫೀಲಿಂಗ್ಸ್ ಹಾಡಿಗಾಗಿ ರಶ್ಮಿಕಾಗೆ ನರಕ ತೋರಿಸಲಾಗಿದೆ ಎಂದು ಸಿಪಿಐ ನಾರಾಯಣ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಏನಿದು ಪುಷ್ಪ 2 ಚಿತ್ರ? ಕೆಂಪುಚಂದನ ಕಳ್ಳನಾ? ಈ ಚಿತ್ರದಲ್ಲಿ ಕೆಂಪು ಚಂದನದ ಕಳ್ಳನನ್ನು ಹೀರೋ ಎಂದು ತೋರಿಸಿ ಯುವಕರ ಮೇಲೆ ನೆಗೆಟಿವ್ ಪ್ರಭಾವ ಬೀರಿದ್ದಾರೆ. ನಾಯಕಿ ರಶ್ಮಿಕಾಗೆ ಫೀಲಿಂಗ್ಸ್ ಹಾಡಿಗೆ ಕುಣಿಯಲು ಇಷ್ಟವಿರಲಿಲ್ಲ. ಆದರೆ, ನಿರ್ದೇಶಕರು ಹೇಳಿದ್ದರಿಂದ ಅದನ್ನು ಮಾಡಬೇಕಾಯಿತು ಆಕೆಯೇ ಹೇಳಿದ್ದಾರೆ. ಇಂತಹ ಅನೇಕ ಮಹಿಳೆಯರು ತಮ್ಮ ಆತ್ಮಗೌರವವನ್ನು ಕೊಲ್ಲುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಧ್ಯಾ ಥಿಯೇಟರ್ ಘಟನೆಯ ಸಂತ್ರಸ್ತರಿಗೆ 2 ಕೋಟಿಯಲ್ಲ 5 ಕೋಟಿ ಕೊಟ್ಟರೂ ಜೀವ ವಾಪಸ್ ಕೊಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಸಿಎಂ ಇಂದು ಚಿತ್ರರಂಗದ ಗಣ್ಯರನ್ನು ಭೇಟಿಯಾಗುತ್ತಿದ್ದಾರೆ ಮತ್ತು ಸರ್ಕಾರವು ಸಹ ಜನರಿಗೆ ಹೊರೆಯಾಗದಂತೆ ನಡೆದುಕೊಳ್ಳಬೇಕು. ಟಿಕೆಟ್ ದರವನ್ನು ಹೆಚ್ಚಿಸಿದರೆ ಕಾಳಸಂತೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಹಿನ್ನೆಲೆ ಏನು?

ಡಿಸೆಂಬರ್​ 4ರಂದು ಹೈದರಾಬಾದ್‌ನ ದಿಲ್‌ಸುಖ್‌ನಗರ ಮೂಲದ ರೇವತಿ (39) ತನ್ನ ಪತಿ ಭಾಸ್ಕರ್ ಮತ್ತು ಮಕ್ಕಳಾದ ಶ್ರೀತೇಜ್ (9) ಮತ್ತು ಸಾನ್ವಿಕ್ (7) ಅವರೊಂದಿಗೆ ಸಂಧ್ಯಾ ಥಿಯೇಟರ್‌ನಲ್ಲಿ ಪ್ರೀಮಿಯರ್ ಶೋ ವೀಕ್ಷಿಸಲು ಬಂದಿದ್ದರು. ಇದೇ ವೇಳೆ ಅಲ್ಲು ಅರ್ಜುನ್​ ಆಗಮಿಸಿದ್ದರಿಂದ ಅವರನ್ನು ನೋಡುಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಕಾಲ್ತುಳಿತ ಉಂಟಾಯಿತು. ನೂಕು ನುಗ್ಗಲಿನಲ್ಲಿ ಸಿಲುಕಿಕೊಂಡ ರೇವತಿ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದರು. ಈ ವೇಳೆ ಜನರು ರೇವತಿಯನ್ನು ತುಳಿದಾಡಿದ್ದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು. ರೇವತಿ ಅವರ ಮಗ ಶ್ರೀತೇಜ್​ ಕೂಡ ಇದೇ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರೇವತಿಯ ಪ್ರಾಣವನ್ನು ಉಳಿಸಲಾಗಲಿಲ್ಲ. ಸದ್ಯ ಶ್ರೀತೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. (ಏಜೆನ್ಸೀಸ್)