ಹಾಗಂತ ಯುಗಾದಿ ಹಬ್ಬದಂದು ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ರಶ್ಮಿಕಾ ಮಾತಿನ ಅರ್ಥವೇನು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳುವ ಮೊದಲೇ ಅವರು, ಸೀದಾ ವಿಷಯಕ್ಕೆ ಬಂದಿದ್ದಾರೆ. ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಎಂಬ ಹೊಸ ಚಿತ್ರಕ್ಕೆ ನಾಯಕಿಯಾಗಿರುವುದಾಗಿ ರಶ್ಮಿಕಾ ಘೋಷಿಸಿದ್ದಾರೆ. ‘ಅನಿಮಲ್’ ಕಳೆದ ವರ್ಷವೇ ಘೋಷಣೆಯಾಗಿತ್ತು. ಆದರೆ, ಚಿತ್ರೀಕರಣ ಇನ್ನೂ ಶುರುವಾಗಿಲ್ಲ.
ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಸಂದೀಪ್ ವಂಗಾ. ಅದೇ ‘ಅರ್ಜುನ್ ರೆಡ್ಡಿ’ ನಿರ್ದೇಶಿಸಿದ್ದರಲ್ಲ, ಅದೇ ಸಂದೀಪ್ ಈಗ ರಣಬೀರ್ ಅಭಿನಯದಲ್ಲಿ ‘ಅನಿಮಲ್’ ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ. ಮುಂಚೆ ಈ ಚಿತ್ರಕ್ಕೆ ಪರಿಣಿತಿ ಚೋಪ್ರಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಈಗ ಕಾರಣಾಂತರಗಳಿಂದ ನಾಯಕಿ ಬದಲಾಗಿದ್ದು, ಆ ಜಾಗಕ್ಕೆ ರಶ್ಮಿಕಾ ಬಂದಿದ್ದಾರೆ. ಶನಿವಾರ, ಹಬ್ಬದ ಪ್ರಯುಕ್ತ ಚಿತ್ರತಂಡದವರು ರಶ್ಮಿಕಾರನ್ನು ಸೋಷಿಯಲ್ ಮೀಡಿಯಾ ಮೂಲಕ ಅಧಿಕೃತವಾಗಿ ಬರಮಾಡಿಕೊಂಡಿದ್ದೂ ಆಗಿದೆ.
ಈ ಚಿತ್ರದಲ್ಲಿ ರಶ್ಮಿಕಾ, ಗೀತಾಂಜಲಿ ಎಂಬ ಪಾತ್ರ ಮಾಡುತ್ತಿದ್ದಾರೆ. ಜತೆಗೆ ಅನಿಲ್ ಕಪೂರ್, ಬಾಬ್ಬಿ ಡಿಯೋಲ್ರಂತಹ ಜನಪ್ರಿಯ ನಟರೂ ಈ ಚಿತ್ರದಲ್ಲಿದ್ದಾರೆ. ಇದಕ್ಕೂ ಮುನ್ನ ರಶ್ಮಿಕಾ, ‘ಮಿಷನ್ ಮಜ್ನು’ ಮತ್ತು ‘ಗುಡ್ಬೈ’ ಚಿತ್ರಗಳಲ್ಲಿ ನಟಿಸಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿವೆ. -ಏಜೆನ್ಸೀಸ್