ಸಿನಿವಾಣಿ

ಕ್ರಿಕೆಟರ್​ ರಾಶಿಕಾ; "ಮನದ ಕಡಲು' ಮೂಲಕ ನಾಯಕಿಯಾದ ಚಿಕ್ಕಮಗಳೂರು ಹುಡುಗಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಮ್ಯಾ, ರತಾ, ರಾಧಿಕಾ, ರಚಿತಾ, ರಶ್ಮಿಕಾ, ರೀಷ್ಮಾ, ರಾಧ್ಯಾ, ರಂಜನಿ, ರಚನಾ, ರೂಪಿಕಾ, ರುಹಾನಿ... ಹೀಗೆ "ರ' ಅಕ್ಷರದ ಹಲವು ಯಶಸ್ವೀ ನಟಿಯರು ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಕೆಲವರು ಮಿಂಚುತ್ತಿದ್ದಾರೆ. ಇನ್ನೂ ಕೆಲವರು ಗಡಿ ದಾಟಿ ಪರಭಾಷೆಗಳಲ್ಲೇ ಸೆಟಲ್​ ಕೂಡ ಆಗಿದ್ದಾರೆ. ಇದೀಗ ಮತ್ತೊಬ್ಬ "ರ' ಅಕ್ಷರದ ಹೆಸರಿನ ಕನ್ನಡದ ಹುಡುಗಿ ಸ್ಯಾಂಡಲ್​ವುಡ್​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅವರೇ ರಾಶಿಕಾ ಶೆಟ್ಟಿ. ಹೌದು, ಯೋಗರಾಜ್​ ಭಟ್​ ನಿರ್ದೇಶಿಸುತ್ತಿರುವ 16ನೇ ಸಿನಿಮಾ "ಮನದ ಕಡಲು' ಚಿತ್ರದ ಮೂಲಕ ರಾಶಿಕಾ ನಾಯಕಿಯಾಗಿ ಡೆಬ್ಯೂ ಮಾಡುತ್ತಿದ್ದಾರೆ.

ಬಾಲ್ಯದಲ್ಲೇ ಹಾಡಿನಲ್ಲಿ ಕುಣಿದಿದ್ದ ಹುಡುಗಿ:

ಚಿಕ್ಕಮಗಳೂರು ಮೂಲದ ರಾಶಿಕಾ ಶೆಟ್ಟಿ ಒಂದನೇ ತರಗತಿ ಓದುತ್ತಿರುವಾಗಲೇ ರಮ್ಯಾ ಮತ್ತು ರತಾ ನಟಿಸಿದ್ದ "ತನನಂ ತನನಂ' ಚಿತ್ರದ ಹಾಡೊಂದರಲ್ಲಿ ಕುಣಿದಿದ್ದರಂತೆ. ಈ ಬಗ್ಗೆ, "ನನಗೆ ಸಿನಿಮಾ ಹಿನ್ನೆಲೆಯಿಲ್ಲ. ನಮ್ಮ ಕುಟುಂಬದಿಂದ ಚಿತ್ರರಂಗಕ್ಕೆ ಬಂದ ಮೊದಲಿಗಳು ನಾನು. ಒಂದನೇ ತರಗತಿಯಲ್ಲಿರುವಾಗ ಡಾನ್ಸ್​ ಪ್ರಾಕ್ಟೀಸ್​ ಮಾಡುತ್ತಿದ್ದೆ. ಆಗ "ತನನಂ ತನನಂ' ಚಿತ್ರದ ಹಾಡೊಂದರ ಶೂಟಿಂಗ್​ಗೆ ನನ್ನನ್ನೂ ಕರೆದುಕೊಂಡು ಹೋಗಿದ್ದರು. ಆ ಚಿತ್ರದಲ್ಲಿ ಬರುವ ಮಕ್ಕಳ ಹಾಡಿಗೆ ನಾನೂ ಡಾನ್ಸ್​ ಮಾಡಿದ್ದೆ. ಅಂದಿನಿಂದಲೇ ನನಗೆ ಸಿನಿಮಾ ಕಡೆ ಸೆಳೆತ ಶುರುವಾಯಿತು' ಎಂದು ಹೇಳಿಕೊಳ್ಳುತ್ತಾರೆ.

ಭಟ್ಟರ ಚಿತ್ರದಲ್ಲಿ ಚಾನ್ಸ್​!

ಹೀಗೆ ಬಾಲ್ಯದಿಂದಲೇ ಸಿನಿಮಾದಲ್ಲಿ ನಟಿಸುವ ಕನಸಿನೊಂದಿಗೆ ್ಯಾಷನ್​ ಡಿಸೈನಿಂಗ್​ ಕೋರ್ಸ್​ ಮಾಡಿದ ರಾಶಿಕಾ, ಕೆಲ ಧಾರಾವಾಹಿಗಳಲ್ಲಿ ನಟಿಸಿದರಂತೆ. "ಅಲ್ಲಿ ನನಗೆ ನಟನೆಯ ಅನುಭವ, ಚಿತ್ರರಂಗದ ಸಂಪರ್ಕ ದೊರೆಯಿತು. ಆ ಮೂಲಕ ನನಗೆ "ಮನದ ಕಡಲು' ಚಿತ್ರದಲ್ಲಿ ನಟಿಸಲು ಅವಕಾಶ ದೊರೆಯಿತು. ಮೊದಲ ಚಿತ್ರದಲ್ಲೇ ಯೋಗರಾಜ್​ ಭಟ್​ ಅವರಂತಹ ಡೈರೆಕ್ಟರ್​ ಬಳಿ ಕೆಲಸ ಮಾಡುವುದು ತಮಾಷೆ ಮಾತಲ್ಲ. ಸ್ವಲ್ಪ ತಯಾರಿ ಬೇಕಿತ್ತು. ನಾನಿಲ್ಲಿ ಕ್ರಿಕೆಟರ್​ ಆಗಿ ಕಾಣಿಸಿಕೊಳ್ಳಲಿದ್ದೇನೆ. ಮೃದು ಭಾಷಿ, ತುಂಬ ಯೋಚಿಸುವ ಹುಡುಗಿಯ ಪಾತ್ರ' ಎಂದು ಖುಷಿಯಿಂದ ಮಾಹಿತಿ ನೀಡುತ್ತಾರೆ ರಾಶಿಕಾ.

ಇನ್ನೊಂದು ಚಿತ್ರ ಓಕೆ ಆಗಿದೆ:

"ಮನದ ಕಡಲು' ರಿಲೀಸ್​ಗೂ ಮುನ್ನವೇ ಇನ್ನೊಂದು ಚಿತ್ರದಲ್ಲಿ ಅವಕಾಶ ಪಡೆದಿರುವ ರಾಶಿಕಾ, ""ಮನದ ಕಡಲು' ನನ್ನ ಮೊದಲ ಹೆಜ್ಜೆ. ಚಿತ್ರದ ಬಗ್ಗೆ ಸಾಕಷ್ಟು ನಿರೀೆಯಿದೆ. ಈ ಚಿತ್ರದ ಶೂಟಿಂಗ್​ ಸಮಯದಲ್ಲೇ, ಹೊಸ ಪ್ರಾಜೆಕ್ಟ್​ನಲ್ಲಿ ಆರ್​ ಬಂತು. ಅದನ್ನೂ ಒಪ್ಪಿಕೊಂಡಿದ್ದೇನೆ. ನಾನೂ ಸೇರಿ ಬಹುತೇಕ ಹೊಸಬರ ತಂಡವದು. ಕೆಲವೇ ದಿನಗಳಲ್ಲಿ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಲಿದೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.

"ರ' ಅಕ್ಷರದ ಮ್ಯಾಜಿಕ್​

"ಚಿತ್ರರಂಗದಲ್ಲಿ ಆರ್​ ಅಕ್ಷರ ಹೆಸರಿನ ನಾಯಕಿಯರು ಸಾಕಷ್ಟು ಜನಪ್ರಿಯರಾಗಿದ್ದಾರೆ. ಅವರನ್ನೆಲ್ಲ ನೋಡಿಕೊಂಡು ಬೆಳೆದವಳು ನಾನು. ನನ್ನ ಹೆಸರೂ ಆರ್​ ಅಕ್ಷರದಿಂದ ಶುರುವಾಗುವುದರಿಂದ, ಅವರಂತೆಯೇ ಹೆಸರು ಮಾಡುವ ಭರವಸೆಯಿದೆ. ಹಾಗಂತ ಕೇವಲ ಅದೃಷ್ಟ ಮಾತ್ರವಲ್ಲ, ಕೆಲಸದ ಮೇಲೆ ಶ್ರದ್ಧತೆ, ಶ್ರಮದ ಮೇಲೆ ನಂಬಿಕೆಯಿಟ್ಟುಕೊಂಡಿದ್ದೇನೆ' ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ರಾಶಿಕಾ ಶೆಟ್ಟಿ.