ಬಾಲಿವುಡ್ ನಟ ರಣವೀರ್ ಸಿಂಗ್
- 18 ತಿಂಗಳು ಯಾವ ಮಾಧ್ಯಮಕ್ಕೂ ಸಂದರ್ಶನ ಕೊಡದಿರಲು ರಣವೀರ್ ಸಿಂಗ್ ನಿರ್ಧಾರ
- ಆ ಚಿತ್ರದ ವಿವಾದದಿಂದ ಮೌನಕ್ಕೆ ಜಾರಿದ ಧುರಂಧರ್ ಹೀರೋ
ಮುಂಬೈ: ನಿರ್ದೇಶಕ ಆದಿತ್ಯ ಧರ್ ನಿರ್ದೇಶನದಲ್ಲಿ ಎರಡು ಭಾಗಗಳಾಗಿ ಮೂಡಿಬಂದ ‘ಧುರಂಧರ್’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಅತಿ ಹೆಚ್ಚು ಗಳಿಕೆ ಕಾಣುವುದರ ಜೊತೆಗೆ ಹಲವು ಹಳೆಯ ರೆಕಾರ್ಡ್ಗಳನ್ನು ಉಡೀಸ್ ಮಾಡಿದೆ. ಜಾಗತಿಕ ಮಟ್ಟದಲ್ಲಿ ಚಿತ್ರವು ಸುಮಾರು 3,200 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಭಾರತದಲ್ಲೇ ಬರೋಬ್ಬರಿ 1,900 ಕೋಟಿ ರೂ. ಗಳಿಸಿದೆ. ಇಲ್ಲಿಯವರೆಗೆ ಯಾವೊಬ್ಬ ಸ್ಟಾರ್ ನಟನಿಗೂ ಸಿಗದ ಬೃಹತ್ ಮೊತ್ತದ ಸಂಭಾವನೆ ಮತ್ತು ಖ್ಯಾತಿ ಪಡೆದಿರುವ ರಣವೀರ್ ಸಿಂಗ್, ಸದ್ಯ ಮುಂದಿನ 18 ತಿಂಗಳು ಯಾವುದೇ ಸಂದರ್ಶನ ನೀಡೋದಿಲ್ಲ ಎಂದಿರುವುದು ಅಚ್ಚರಿ ಮೂಡಿಸಿದೆ.
ಆರಂಭದಲ್ಲಿ 'ಡಾನ್ 3' ಚಿತ್ರಕ್ಕೆ ರಣವೀರ್ ಸಿಂಗ್ ಹೆಸರು ಕೇಳಿಬಂದಿತ್ತು. ಆದರೀಗ, ಪ್ರಾಜೆಕ್ಟ್ನಿಂದ ಅವರು ಎಕ್ಸಿಟ್ ಆಗಿರುವುದಾಗಿ ಸುದ್ದಿಗಳು ಹರಿದಾಡುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಿಯೂ ಮಾತನಾಡಲು ಬಯಸದ ರಣವೀರ್, ಮುಂದಿನ 18 ತಿಂಗಳು ಸಾರ್ವಜನಿಕವಾಗಿ ವಿವಾದದ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ ಎಂದಿದ್ದಾಗಿ ನಟನ ಟೀಮ್ ಸ್ಪಷ್ಟಪಡಿಸಿದೆ.
ಸಿನಿ ವರದಿಗಳ ಪ್ರಕಾರ, ಇತ್ತೀಚೆಗೆ ಪತ್ರಕರ್ತರೊಬ್ಬರು ರಣವೀರ್ ಅವರೊಂದಿಗೆ ಚಿತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದಾಗ, "ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾದೆ. ಈ ಸಂದರ್ಭದಲ್ಲಿ, ಡಾನ್ 3 ವಿವಾದದ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ ಮತ್ತು ಕನಿಷ್ಠ 18 ತಿಂಗಳವರೆಗೆ ಯಾವುದೇ ಸಂದರ್ಶನಗಳನ್ನು ನೀಡುವುದಿಲ್ಲ ಎಂದರು ಎಂದು ತಿಳಿಸಿದ್ದಾರೆ.
'ಪ್ರಲೇ' ರಿಲೀಸ್ವರೆಗೂ ಇಲ್ಲ ಸಂದರ್ಶನ
ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಜೈ ಮೆಹ್ತಾ ನಿರ್ದೇಶನದ ಮುಂಬರುವ ಚಿತ್ರ 'ಪ್ರಲೇ' ಬಿಡುಗಡೆಯಾಗುವವರೆಗೂ ರಣವೀರ್, ಯಾವುದೇ ಪತ್ರಿಕಾಗೋಷ್ಠಿ ಅಥವಾ ಸಂದರ್ಶನಗಳಲ್ಲಿ ಮಾತನಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು 'ಡಾನ್ 3' ಚಿತ್ರತಂಡದಿಂದ ಅವರು ಎಕ್ಸಿಟ್ ಆಗಲು ಒಂದಷ್ಟು ಆಂತರಿಕ ಭಿನ್ನಾಭಿಪ್ರಾಯ, ಪ್ರೊಡಕ್ಷನ್ ಕೆಲಸಗಳಲ್ಲಿ ವಿಳಂಬ ಮತ್ತು ಅಂತಿಮ ಸ್ಕ್ರಿಪ್ಟ್‌ನಲ್ಲಿ ಗೊಂದಲಗಳೇ ಕಾರಣ ಎಂದು ಹೇಳಲಾಗಿದೆ. ಆದರಿದು, ಎಷ್ಟು ನಿಜ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ,(ಏಜೆನ್ಸೀಸ್).