ಸಿನಿವಾಣಿ

20 ವರ್ಷಗಳ ಹಿಂದಿನ ಘಟನೆ 'ರಂಗಸಮುದ್ರ'ವಾದಾಗ ...

chetannadiger

ಬೆಂಗಳೂರು: ಕನ್ನಡದಲ್ಲಿ ನೈಜ ಘಟನೆಗಳನ್ನು ಅಧರಿಸಿದ ಚಿತ್ರಗಳಿಗೇನೂ ಕೊರತೆ ಇಲ್ಲ. ಈಗಾಗಲೇ ಸಾಕಷ್ಟು ನೈಜ ಘಟನೆಗಳನ್ನಾಧರಿಸಿದ ಚಿತ್ರಗಳು ಬಿಡಗುಡೆಯಾಗಿದ್ದು, ಆ ಸಾಲಿಗೆ ರಾಜಕುಮಾರ್​ ಅಸ್ಕಿ ನಿರ್ದೇಶನದ 'ರಂಗಸಮುದ್ರ' ಸಹ ಒಂದು.

ಈಗಾಗಲೇ 'ರಂಗಸಮುದ್ರ' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಎರಡು ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅದು ಸಹ ಸದ್ಯದಲ್ಲೇ ಮುಗಿಯಲಿದೆ. ಈ ಮಧ್ಯೆ, ಚಿತ್ರತಂಡದವರು ಪ್ರಚಾರ ಕೆಲಸವನ್ನು ಪ್ರಾರಂಭಿಸಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಊರೊಂದರ ಹೆಸರು ರಂಗಸಮುದ್ರ. ಊರಿನ ಹೆಸರೇ ಈಗ ಚಿತ್ರದ ಶೀರ್ಷಿಕೆಯಾಗಿದೆ. 20 ವರ್ಷಗಳ ಹಿಂದೆ ಈ ಊರಿನಲ್ಲಿ ನಡೆದ ಫಟನೆಯೇ ಚಿತ್ರದ ಪ್ರಮುಖ ಕಥಾವಸ್ತು. ರಂಗಾಯಣ ರಘು ಮತ್ತು ಸಂಪತ್ ರಾಜ್ ಪ್ರಧಾನ ಪಾತ್ರದಲ್ಲಿದ್ದು ಇದೇ ಮೊದಲಿಗೆ ಹೊಸ ಆಯಾಮದ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಜನಪದ ಸೊಗಡಿನ ಪಕ್ಕಾ ದೇಸಿ ಕಥೆ ಈ ಚಿತ್ರದ ಹೆಗ್ಗಳಿಕೆ ಎಂದರೆ ತಪ್ಪಿಲ್ಲ.

ಮೈಸೂರು, ಬಿಜಾಪುರ, ಬೆಂಗಳೂರು ಮುಂತಾದ ಕಡೆ 40 ದಿನಗಳ ಚಿತ್ರೀಕರಣ ಮುಗಿದಿದೆ. ರಘು ಮತ್ತು ಸಂಪತ್​ ಜತೆಗೆ, ಕಾರ್ತಿಕ್, ದಿವ್ಯಾಗೌಡ, ಗುರುರಾಜ ಹೊಸಕೋಟೆ, ಮೋಹನ್ ಜುನೇಜ, ಮೂಗು ಸುರೇಶ್, ಮಹೇಂದ್ರ, ಸದಾನಂದ, ಸ್ಕಂದ ತೇಜಸ್ ಮುಂತಾದವರು ಅಭಿನಯಿಸಿದ್ದಾರೆ. ರಾಜಕುಮಾರ್ ಅಸ್ಕಿ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ಬರೆದಿದ್ದಾರೆ. ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೊಣನೂರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ದೇಸಿ ಮೋಹನ್ ಸಂಗೀತ ಸಂಯೋಜಿಸಿದರೆ, ಆರ್ ಗಿರಿ ಛಾಯಾಗ್ರಹಣ ಮಾಡಿದ್ದಾರೆ.