ಬೆಂಗಳೂರು: 'ಪಡ್ಡೆಹುಲಿ', '100', "ಗಾಳಿಪಟ 2' ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ರಮೇಶ್ ರೆಡ್ಡಿ, ಈಗ ಸದ್ದಿಲ್ಲದೆ ಹಿಂದಿಯಲ್ಲೊಂದು ಚಿತ್ರ ನಿರ್ಮಾಣ ಮಾಡಿದ್ದಾರೆ. "100' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲೇ ಅವರು, ಆ ಚಿತ್ರವನ್ನು ಹಿಂದಿಯಲ್ಲಿ ರೀಮೇಕ್ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈಗ ಅವರು "ದಿಲ್ ಹೈ ಗ್ರೇ' ಎಂಬ ಚಿತ್ರವನ್ನು ನಿರ್ಮಿಸಿದ್ದು, ಊರ್ವಶಿ ರೌತೇಲ ನಾಯಕಿಯಾಗಿ ನಟಿಸಿದ್ದಾರೆ.
'ದಿಲ್ ಹೈ ಗ್ರೇ' ಚಿತ್ರವು ಕನ್ನಡದ '100' ಚಿತ್ರದ ರೀಮೇಕ್ ಆಗಿದ್ದು, ಈಗಾಗಲೇ ಚಿತ್ರೀಕರಣ ಸಂಪೂರ್ಣವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಜುಲೈನಲ್ಲಿ ಚಿತ್ರ ಬಿಡುಗಡೆಯಾಗಲಿದೆ. "100' ಚಿತ್ರವು ತಮಿಳಿನ 'ತಿರುಟ್ಟು ಪಯಲೆ 2'ನ ರೀಮೇಕ್ ಆಗಿದ್ದು, ಮೂಲ ಚಿತ್ರವನ್ನು ನಿರ್ದೇಶಿಸದ್ದ ಸುಸಿ ಗಣೇಶನ್ ಅವರೇ ಹಿಂದಿಯ ಅವತರಣಿಕೆಯನ್ನೂ ನಿರ್ದೇಶಿಸಿದ್ದಾರೆ.
ಈ ಚಿತ್ರವು ಮೂರು ಪಾತ್ರಗಳ ಸುತ್ತ ಸುತ್ತುತ್ತದೆ. ವಿನೀತ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡರೆ, ಅಕ್ಷಯ್ ಆನ್ಲೈನ್ನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುವ ವಿಲನ್ ಆಗಿ ನಟಿಸಿದ್ದಾರೆ. ರಚಿತಾ ರಾಮ್ ಮಾಡಿದ ಪಾತ್ರವನ್ನು ಹಿಂದಿಯಲ್ಲಿ ಊರ್ವಶಿ ಮಾಡಿದ್ದಾರೆ.
ಇಂದಿನ ಕಾಲಟ್ಟಕ್ಕೆ ಕಥೆ ಸೂಕ್ತವಾಗಿದೆ ಎನ್ನುವ ರಮೇಶ್ ರೆಡ್ಡಿ, 'ಇಲ್ಲಿ ಕಥೆಯೇ ಹೀರೋ. ಅದೇ ಕಾರಣಕ್ಕೆ ಈ ಚಿತ್ರವನ್ನು ಬರೀ ಕನ್ನಡದಲ್ಲಷ್ಟೇ ಅಲ್ಲ, ಹಿಂದಿಯಲ್ಲೂ ನಮ್ಮ ಸೂರಜ್ ಪ್ರೊಡಕ್ಷನ್ಸ್ನಡಿ ನಿರ್ಮಾಣ ಮಾಡಿದ್ದೇನೆ' ಎನ್ನುತ್ತಾರೆ.
'ದಿಲ್ ಹೈ ಗ್ರೇ' ಅಲ್ಲದೆ 'ಬ್ಲಾಕ್ ರೋಸ್' ಮತ್ತು ಹೆಸರಿಡದ ಇನ್ನೊಂದು ಚಿತ್ರದಲ್ಲೂ ಊರ್ವಶಿ ನಟಿಸುತ್ತಿದ್ದು, ಆ ಚಿತ್ರಗಳೂ ಇದೇ ವರ್ಷ ಬಿಡುಗಡೆಯಾಗಲಿವೆ.