ಸಿನಿವಾಣಿ

ಸ್ಲೀಪ್​ಲೆಸ್ ಶಿವಾಜಿ ಆಗಿ ಮಿಂಚು ಹರಿಸಲಿರುವ ನಟ ರಮೇಶ್​ ಅರವಿಂದ್​

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯ ನಿದ್ರೆಯೇ ಒಂದಷ್ಟು ಸುದ್ದಿ ಮಾಡುತ್ತಿದೆ. ಅತ್ತ ನಟ ಪ್ರಜ್ವಲ್ ಕುಂಭಕರ್ಣನಂತೆ ನಿದ್ರಿಸುವ ‘ಜಂಟಲ್​ವುನ್’ ಆಗಿ ತೆರೆ ಮೇಲೆ ಬರಲಿದ್ದರೆ, ಇತ್ತ ನಟ ರಮೇಶ್ ಅರವಿಂದ್ ನಿದ್ರಾಹೀನತೆಯಿಂದ ಬಳಲುವ ಸ್ಲೀಪ್​ಲೆಸ್ ಶಿವಾಜಿ ಆಗಿ ಪರದೆ ಮೇಲೆ ಮಿಂಚಲಿದ್ದಾರೆ. ಅದರಲ್ಲೂ ಈ ಚಿತ್ರ ಜಾಗರಣೆಯ ಹಬ್ಬವಾದ ಶಿವರಾತ್ರಿಯಂದು, ಅಂದರೆ ಫೆ. 21ಕ್ಕೆ ಬಿಡುಗಡೆ ಆಗಲಿರುವುದು ಮತ್ತೊಂದು ವಿಶೇಷ.

‘ಶಿವಾಜಿ ಸುರತ್ಕಲ್’ ಸಿನಿಮಾದಲ್ಲಿ ನಟ ರಮೇಶ್ ಕ್ಲಿಷ್ಟ ಅಪರಾಧ ಪ್ರಕರಣವನ್ನು ಪತ್ತೆ ಹಚ್ಚುವ ಎಸಿಪಿ ಆಗಿ ಕಾಣಿಸಲಿದ್ದಾರೆ. ವಿಶೇಷ ಎಂದರೆ ಈ ಪಾತ್ರದ ಮೂಲಕ ಒಂದು ಕುತೂಹಲಕಾರಿ ಕಥೆ ಹೇಳುವ ಜತೆಗೆ ಮಾನವೀಯ ಅಂಶಗಳನ್ನೂ ಬೆಳಕಿಗೆ ತರುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ‘ಕಥೆ ಎರಡು ಕಾಲಘಟ್ಟದಲ್ಲಿ ಸಾಗುವುದರಿಂದ ರಮೇಶ್ ಅವರು ಎರಡು ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣಗಿರಿ ಎಂಬಲ್ಲಿ ನಡೆಯುವ ಕೊಲೆ ಪ್ರಕರಣವೊಂದನ್ನು ಪತ್ತೆ ಮಾಡುವ ಪೊಲೀಸ್ ಅಧಿಕಾರಿ ಆಗಿ ಅವರು ಇಲ್ಲಿ ತುಂಬ ವಿಭಿನ್ನವಾದ ಪಾತ್ರ ಮಾಡಿದ್ದಾರೆ. ಈ ಮೂಲಕ ಒಂದು ಸಸ್ಪೆನ್ಸ್ ಕಥೆ ಹೇಳುವ ಜತೆಗೆ ಒಬ್ಬ ಪೊಲೀಸ್ ಅಧಿಕಾರಿಯ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನೂ ಹೇಳಲಾಗುತ್ತಿದೆ. ಎಲ್ಲರಿಗೂ ಅವರದ್ದೇ ಆದ ಸಮಸ್ಯೆ ಇರುತ್ತದೆ. ಆ ಸಮಸ್ಯೆ ನಡುವೆಯೂ ಹೇಗೆ ಕರ್ತವ್ಯ ನಿಭಾಯಿಸುತ್ತಾರೆ ಎಂಬುದೇ ಕಥಾಹಂದರ. ಇದು ಸಸ್ಪೆನ್ಸ್ ಚಿತ್ರವಾದರೂ ಇಲ್ಲಿ ಭಾವನೆಗಳೇ ಪ್ರಧಾನ’ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.

‘ಈ ಚಿತ್ರದಲ್ಲಿನ ಶಿವಾಜಿ ಅಪರಾಧ ಪ್ರಕರಣ ಪತ್ತೆಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಳ್ಳುತ್ತಾನೆ. ಹಗಲಿರುಳೆನ್ನದೆ ಪ್ರಕರಣದ ಬಗ್ಗೆಯೇ ಯೋಚಿಸುವುದರಿಂದ ನಿದ್ರೆಗೆಡುತ್ತಾನೆ. ರಾತ್ರಿಯಲ್ಲೂ ಪ್ರಕರಣದ ಪತ್ತೆ ಕುರಿತು ಆಲೋಚಿಸುವುದರಿಂದ ಹೆಚ್ಚೂಕಡಿಮೆ ದಿನಕ್ಕೆ ಇಪ್ಪತ್ತು ಗಂಟೆ ಎಚ್ಚರದಲ್ಲೇ ಇರುವಂಥ ಕ್ಯಾರೆಕ್ಟರ್ ಇದು’ ಎನ್ನುತ್ತಾರೆ ಆಕಾಶ್. ರಮೇಶ್ ನಾಯಕರಾಗಿರುವ ಈ ಸಿನಿಮಾದಲ್ಲಿ ನಾಯಕಿ ಆಗಿ ರಾಧಿಕಾ ನಾರಾಯಣ್ ಅಭಿನಯಿಸಿದ್ದಾರೆ. ಅವರದ್ದಿಲ್ಲಿ ಲಾಯರ್ ಪಾತ್ರ. ಇನ್ನು ಮನಃಶಾಸ್ತ್ರಜ್ಞೆಯ ಪಾತ್ರದಲ್ಲಿ ಆರೋಹಿ ನಾರಾಯಣ್ ನಟಿಸಿದ್ದಾರೆ ಎಂಬ ವಿವರಣೆ ನೀಡಿದ್ದಾರೆ ನಿರ್ದೇಶಕರು. ಫೆ. 6ಕ್ಕೆ ಟ್ರೇಲರ್ ರಿಲೀಸ್ ಮಾಡಲಿರುವ ಚಿತ್ರತಂಡ, ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ಬಿಟ್ಟುಕೊಡಲಿದೆಯಂತೆ.