ರಾಮಾಯಣ ಟ್ರೈಲರ್ ಬೆಳಗ್ಗೆ 4.15ಕ್ಕೆ ರಿಲೀಸ್ ಆಗಿದ್ದೇಕೆ? ಬ್ರಹ್ಮ ಮುಹೂರ್ತವಲ್ಲ, ಅಸಲಿ ಕಾರಣವೇ ಬೇರೆ ಇದೆ...Ramayana Trailer
- ರಾಮಾಯಣ ಚಿತ್ರದ ಟ್ರೈಲರ್ ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ
- ಅಮೆರಿಕದ ಪ್ರೈಮ್ ಟೈಮ್ ಗಮನದಲ್ಲಿಟ್ಟುಕೊಂಡು ಟ್ರೈಲರ್ ರಿಲೀಸ್ ಮಾಡಿರುವ ನಿರ್ಮಾಪಕರ ತಂತ್ರಗಾರಿಕೆ
- ಸ್ಪೈಡರ್ ಮನ್ ಸಿನಿಮಾ ಜೊತೆ ಪ್ರದರ್ಶನಕ್ಕೂ ಮುನ್ನವೇ ಲೀಕ್ ಆಗುವ ಭೀತಿಯಿಂದ ಮುಂಜಾನೆ ಬಿಡುಗಡೆ
- ಅದ್ಭುತ ದೃಶ್ಯ ಹಾಗೂ ಬಿಜಿಎಂ ನಡುವೆಯೂ ಕೆಲವು ಸಿಜಿಐ ಶಾಟ್ ಗಳ ಬಗ್ಗೆ ವ್ಯಕ್ತವಾಗುತ್ತಿರುವ ಮಿಶ್ರ ಪ್ರತಿಕ್ರಿಯೆ
Ramayana Trailer : ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಮತ್ತು ಬೃಹತ್ ವೆಚ್ಚದ ‘ರಾಮಾಯಣ’ ಚಿತ್ರದ ಟ್ರೈಲರ್ ಇಂದು ಮುಂಜಾನೆಯೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ಈ ಸಿನಿಮಾದ ದೃಶ್ಯ ವೈಭವ ಹಾಗೂ ಪಾತ್ರವರ್ಗದ ಗೆಟಪ್ ಪ್ರಶಂಸೆಗೆ ಪಾತ್ರವಾಗಿದ್ದರು ಸಹ ನಿರ್ಮಾಪಕರ ಟ್ರೈಲರ್ ಬಿಡುಗಡೆ ತಂತ್ರಗಾರಿಕೆ ಮಾತ್ರ ಈಗ ಗಾಸಿಪ್ ಮತ್ತು ಚರ್ಚೆಗೆ ಗ್ರಾಸವಾಗಿದೆ.
ನಿತ್ಯದ ರೂಢಿಯಂತೆ ಬೆಳಗ್ಗೆ ಅಥವಾ ಸಂಜೆ ಬಿಡುಗಡೆಯಾಗಬೇಕಿದ್ದ ಟ್ರೈಲರ್ ಅನ್ನು ಜುಲೈ 30ರಂದು ಬೆಳಗ್ಗೆ ಬ್ರಹ್ಮ ಮುಹೂರ್ತದ ಸಮಯವಾದ 4.15ಕ್ಕೆ ರಿಲೀಸ್ ಮಾಡಲಾಯಿತು. ಇದಕ್ಕೂ ಮುಂಚೆ ಜುಲೈ 24ರಂದೇ ಬರಬೇಕಿದ್ದ ಟ್ರೈಲರ್ ಅನ್ನು ಮುಂದೂಡಲಾಗಿತ್ತು. ನಿರ್ಮಾಪಕರು ಇದಕ್ಕೆ ಆಧ್ಯಾತ್ಮಿಕ ಆಯಾಮವನ್ನು ನೀಡಲು ಪ್ರಯತ್ನಿಸಿದ್ದರೂ, ಇದರ ಹಿಂದೆ ಬೇರೆಯದ್ದೇ ಆದ ಲೆಕ್ಕಾಚಾರವಿದೆ ಎಂಬ ಚರ್ಚೆ ಇದೀಗ ಜೋರಾಗಿದೆ.
ಈ ಟ್ರೈಲರ್ ಅನ್ನು ಇಂದು ಭಾರತದಲ್ಲಿ ಬಿಡುಗಡೆಯಾಗಲಿರುವ ಹಾಲಿವುಡ್‌ನ ಬಹುನಿರೀಕ್ಷಿತ 'ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ' ಚಿತ್ರದ ಜೊತೆಗೆ ಥಿಯೇಟರ್‌ಗಳಲ್ಲಿ ಪ್ರದರ್ಶಿಸಲು ಪ್ಲಾನ್ ಮಾಡಲಾಗಿದೆ. ಆದರೆ, ಥಿಯೇಟರ್‌ನಿಂದಲೇ ಕ್ಲಿಪ್‌ಗಳು ಲೀಕ್ ಆಗಿ ವೈರಲ್ ಆಗುವ ಮುನ್ನವೇ ನಿರ್ಮಾಪಕರು ಅಧಿಕೃತವಾಗಿ ಡಿಜಿಟಲ್ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಒಂದು ವೇಳೆ ಬಿಡುಗಡೆ ಮಾಡದೇ ಹೋಗಿದ್ದರೆ ಥಿಯೇಟರ್‌ನಿಂದಲೇ ವಿಡಿಯೋ ಕ್ಲಿಪ್‌ಗಳು ಲೀಕ್ ಆಗುವ ಭಯವಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಭಾರತದಲ್ಲಿ ಬೆಳಗಿನ ಜಾವ 4.15 ಎಂದರೆ, ಅದು ಅಮೆರಿಕದಲ್ಲಿ ಪ್ರೈಮ್ ಟೈಮ್ ಸಂಜೆಯ ಸಮಯವಾಗಿದೆ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಮೊದಲಿನಿಂದಲೂ ಹೇಳುತ್ತಿರುವಂತೆ, ಈ ಚಿತ್ರವನ್ನು ಭಾರತೀಯ ಮಾರುಕಟ್ಟೆಗೆ ಮಾತ್ರವಲ್ಲದೆ ಜಾಗತಿಕ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ. ವಿದೇಶಿ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾದರೆ ಅದು ಸೋತಂತೆ ಎಂದು ಅವರು ಹಿಂದೆ ತಿಳಿಸಿದ್ದರು. ಈ ಜಾಗತಿಕ ತಂತ್ರವೇ ಈಗ ಭಾರತೀಯ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.
'ರಾಮಾಯಣ' ಎನ್ನುವುದು ಭಾರತೀಯರಿಗೆ ಕೇವಲ ಸಿನಿಮಾವಲ್ಲ, ಬದಲಿಗೆ ಕೋಟ್ಯಂತರ ಜನರ ಭಕ್ತಿ ಮತ್ತು ನಂಬಿಕೆಯ ಪವಿತ್ರ ಮಹಾಕಾವ್ಯ. ಶ್ರೀರಾಮ, ಸೀತಾಮಾತೆ ಮತ್ತು ಹನುಮಂತನನ್ನು ನಾವು ದೇವರೆಂದು ಪೂಜಿಸುತ್ತೇವೆ. ಇಂತಹ ಪವಿತ್ರ ಕಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಭರದಲ್ಲಿ, ದೇಶೀಯ ಪ್ರೇಕ್ಷಕರ ಭಾವನೆಗಳು ಮತ್ತು ತವಕವನ್ನು ನಿರ್ಮಾಪಕರು ಕಡೆಗಣಿಸಿದ್ದಾರೆ ಎಂಬ ಭಾವನೆ ಮೂಡಿದೆ. ಕಾಮಿಕ್-ಕಾನ್ ಇವೆಂಟ್‌ನಲ್ಲಿ ಸೋರಿಕೆಯಾದ ವಿಡಿಯೋಗಳು ಮತ್ತು ಈಗಾಗಲೇ ನೆಗೆಟಿವ್ ಮಾತುಗಳನ್ನು ಕೇಳಿಸಿಕೊಂಡಿರುವ ಟೀಸರ್ ಚಿತ್ರದ ಮೇಲಿನ ಥ್ರಿಲ್ ಅನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ ಎಂದೇ ಹೇಳಬೇಕು.
ಅಂತಿಮವಾಗಿ ಟ್ರೈಲರ್ ನೋಡುವುದಾದರೆ, ಅದ್ಭುತ ದೃಶ್ಯ, ಎ.ಆರ್. ರೆಹಮಾನ್ ಹಾಗೂ ಹಾನ್ಸ್ ಝಿಮ್ಮರ್ ಅವರ ಜುಗಲ್ಬಂದಿಯ ಬಿಜಿಎಂ, ರಣಬೀರ್, ಸಾಯಿ ಪಲ್ಲವಿ ಮತ್ತು ಯಶ್ ಅವರ ಲುಕ್ಸ್ ಚೆನ್ನಾಗಿದ್ದರೂ, ಕೆಲವು ಸಿಜಿಐ ಶಾಟ್‌ಗಳು ಹಾಗೂ ಕ್ಯಾರೆಕ್ಟರ್ ಡಿಸೈನ್‌ಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೇರಿಸುವುದು ಒಳ್ಳೆಯ ಬೆಳವಣಿಗೆಯಾದರೂ, ಆ ರಭಸದಲ್ಲಿ ಸ್ವದೇಶಿ ಅಭಿಮಾನಿಗಳ ನಿರೀಕ್ಷೆಗಳನ್ನು ಕಡೆಗಣಿಸಲಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಸದ್ಯ ಚಿತ್ರದ ಕಂಟೆಂಟ್‌ಗಿಂತಲೂ ಮಿಗಿಲಾಗಿ, ಚಿತ್ರತಂಡ ಅನುಸರಿಸಿದ ವಿಚಿತ್ರ ಬಿಡುಗಡೆ ತಂತ್ರಗಾರಿಕೆಯೇ ಎಲ್ಲೆಡೆ ಹಾಟ್ ಟಾಪಿಕ್ ಆಗಿದೆ, (ಏಜೆನ್ಸೀಸ್).