ಮುಂಬೈ: 80ರ ದಶಕದ ಜನಪ್ರಿಯ ಬಾಲಿವುಡ್ ನಟಿಯರಲ್ಲಿ 'ರಾಮ್ ತೇರಿ ಗಂಗಾ ಮೈಲಿ ಖ್ಯಾತಿಯ ಮಂದಾಕಿನಿ ಸಹ ಒಬ್ಬರು. ನಟಿಸಿದ್ದು ಕೆಲವೇ ಚಿತ್ರಗಳಲ್ಲಾದರೂ, ರಾಜ್ ಕಪೂರ್ ಪರಿಚಯಿಸಿದ ನಾಯಕಿ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು ಅವರು. ಆರಂಭದಲ್ಲಿ ಒಂದಿಷ್ಟು ಚಿತ್ರಗಳ ಮೂಲಕ ಜನಪ್ರಿಯರಾದ ಅವರು, ನಂತರ ಬೇರೆಯದೇ ಕಾರಣಗಳಿಗೆ ಸುದ್ದಿಯಾದರು.
ಪ್ರಮುಖವಾಗಿ ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆಗೆ ಅವರಿಗೆ ಅಫೇರ್ ಇದೆ ಎಂಬ ಸುದ್ದಿ ಇತ್ತು. ಆದರೆ, ಅವೆಲ್ಲವನ್ನೂ ನಿರಾಕರಿಸಿದ್ದ ಮಂದಾಕಿನಿ, ಸ್ವಲ್ಪ ಕಾಲ ಭೂಗತರಾಗಿದ್ದರು. ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು.
ಈಗ ಮಂದಾಕಿನಿ, ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರಂತೆ. ತಮ್ಮ ವಯಸ್ಸಿಗೆ ತಕ್ಕುದಾದ ಪಾತ್ರಗಳನ್ನು ಮಾಡುವುದಕ್ಕೆ ಅವರು ಸಿದ್ಧರಿದ್ದು, ಅಂತಹ ಅವಕಾಶಗಳನ್ನು ಎದುರು ನೋಡುತ್ತಿದ್ದಾರಂತೆ. ಈಗಾಗಲೇ ಕೆಲವು ಜನಪ್ರಿಯ ನಿರ್ದೇಶಕರನ್ನು ಅವರು ಭೇಟಿ ಮಾಡಿದ್ದು, ತಮ್ಮ ರೀಎಂಟ್ರಿಗೆ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ಅವರು ಮನವಿ ಮಾಡಿದ್ದಾರಂತೆ. ಅವಕಾಶ ಸಿಗುತ್ತಿದ್ದಂತೆಯೇ, ಅವರು ದೊಡ್ಡ ಮಟ್ಟದಲ್ಲಿ ಚಿತ್ರರಂಗಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ.
ಹಾಗೆ ನೋಡಿದರೆ, ಮಂದಾಕಿನಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಇದು ಮೊದಲೇನಲ್ಲ. 80ರ ದಶಕದಲ್ಲಿ ಚಿತ್ರರಂಗ ಬಿಟ್ಟು ಹೋದ ಅವರು, ಹಲವು ವರ್ಷಗಳ ನಂತರ ಪುನಃ ವಾಪಸ್ಸಾಗಿದ್ದರು. 2002ರಲ್ಲಿ 'ಅಮರ್ ಪ್ರೇಮ್' ಎಂಬ ಬಂಗಾಲಿ ಚಿತ್ರದಲ್ಲೂ ನಟಿಸಿದ್ದರು. ಆ ನಂತರ ಡಾ. ರಿಂಗ್ಪೋಚೆ ಎನ್ನುವವರನ್ನು ಮದುವೆಯಾದ ಅವರು, ಇದೀಗ ಚಿತ್ರರಂಗಕ್ಕೆ ಪುನಃ ಮರಳುವುದಕ್ಕೆ ಉತ್ಸುಕರಾಗಿದ್ದಾರೆ.