ಸಿನಿವಾಣಿ

Dilmaar Review; ಸ್ವಲ್ಪ ಸತ್ಯ, ಸ್ವಲ್ಪ ಉಪೇಂದ್ರ, ಪೂರ್ತಿ ಸೈಕೋ!

ಚಿತ್ರ: ದಿಲ್ಮಾರ್​

ನಿರ್ದೇಶನ: ಚಂದ್ರಮೌಳಿ

ತಾರಾಗಣ: ರಾಮ್​ ಗೌಡ, ಸಾಯಿಕುಮಾರ್​, ಡಿಂಪಲ್​ ಹಯಾತಿ, ಅದಿತಿ ಪ್ರಭುದೇವ, ಶರತ್​ ಲೋಹಿತಾಶ್ವ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

ಮಂಗಳೂರಿನ ಡಾನ್​ ಭಾರ್ಗವ ಅಲಿಯಾಸ್​ ಗುಡ್​ ಬಾಯ್​ನ (ಸಾಯಿಕುಮಾರ್​) ತಂದೆಯ ಆರನೇ ಹೆಂಡತಿಯ ಮಗನ ಕೊಲೆಯಾಗಿರುತ್ತದೆ. "ತಿಂಡಿ ತಿಂದಿಲ್ವಾ? ಹಸಿವಾಗ್ತಿದ್ಯಾ? ತಗೋ ಬುಲೆಟ್​ ತಿನ್ನು' ಎಂದು ಶೂಟ್​ ಮಾಡುವ ಈ ಸೈಕೋ ಡಾನ್​, ಸಹೋದರ ಧೂಳ್​ ಪ್ರಕಾಶನ ಕೊಲೆಗಾರನನ್ನು ಹುಡುಕತೊಡಗುತ್ತಾನೆ. ಮತ್ತೊಂದೆಡೆ ಶಾನೆ ಗೌಡರ (ಶರತ್​) ಮಗಳು ಅಕ್ಷತಾ (ಅದಿತಿ) ಹಿಂದೆ ಬೀಳುವ ಎಲೆಕ್ಟ್ರೀಷಿಯನ್​ ಶುಕ್ಲ (ರಾಮ್​), "ಓಂ' ಚಿತ್ರದ ಸತ್ಯನಂತೆ "ಐ ಲವ್​ ಯೂ, ಯೂ ಮಸ್ಟ್​ ಲವ್​ ಮೀ' ಅಂತ ಆಕೆಯನ್ನು ಪೀಡಿಸುತ್ತಿರುತ್ತಾನೆ. ಈ ಶುಕ್ಲನೋ ಸೈಕೋ ಭಾರ್ಗವನಿಗಿಂತ ದೊಡ್ಡ ಸೈಕೋ. ಯಾರೋ ನಡೆಯುವ ಸ್ಪೆಷಲ್​​ ಇಷ್ಟವಾಗಲಿಲ್ಲ ಅಂತ ಹೊಡೆಯುವುದು, ಯಾರದ್ದೋ ಹೆಣ ಹೂಳಲು ತೆಗೆದಿದ್ದ ಗುಂಡಿಯಲ್ಲಿ ತೊಟ್ಟಿಲು ಅಂತ ಮಲಗುವುದು, ದೇವರು ಎಲ್ಲೆಡೆ ಇದ್ದಾನೆ ಅಂತ ಲೈಟ್​ ಕಂಬಕ್ಕೆ ಪೂಜೆ ಮಾಡುವುದು, ಕ್ಲೋಸ್​ ಫ್ರೆಂಡ್​ ಸತ್ತ ಅಂತ ನಗುವುದು, ತನ್ನ ಮೆದುಳಿನ ಮಾತನ್ನು ಕೇಳಬಾರದು ಅಂತ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು... ಹೀಗೆ ಅವನದು ವಿಲಕ್ಷಣ ಬದುಕು. ಇಂತಹ ಶುಕ್ಲ ನನಗೆ ಯಾರೆಂದೇ ಗೊತ್ತಿಲ್ಲ ಎಂಬುದು ಅಕ್ಷತಾ ವಾದ. ಜತೆಗೆ ಅಕ್ಷತಾ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ವಿಶಾಲ್​ ಜತೆ ಆಕೆಯ ತಂದೆ ಮದುವೆ ಫಿಕ್ಸ್​ ಮಾಡಿರುತ್ತಾರೆ. ಆದರೆ ಶುಕ್ಲ, "ಅವನನ್ನು ಬಿಡು, ನನ್ನ ಲವ್​ ಮಾಡು' ಅಂತ ಆಕೆಗೆ ಕಾಟ ಕೊಡಲಾರಂಭಿಸುತ್ತಾನೆ. ಅಲ್ಲಿಂದ ಈ ಶುಕ್ಲನ ಫ್ಲ್ಯಾಶ್​ಬ್ಯಾಕ್​ ತೆರೆದುಕೊಳ್ಳುತ್ತದೆ.

ಮೊದಲರ್ಧ "ಓಂ' ಸತ್ಯ ಮತ್ತು ದ್ವೀತಿಯಾರ್ಧದಲ್ಲಿ "ಉಪೇಂದ್ರ' ಪಾತ್ರವನ್ನು ನೆನಪಿಸುತ್ತಾರೆ ನಾಯಕ ರಾಮ್​ ಗೌಡ. ಮೊದಲ ಚಿತ್ರದಲ್ಲೇ ಆ್ಯಂಟಿ ಹೀರೋ ಆಗಿ ಉತ್ತಮ ಅಭಿನಯ ನೀಡಿದ್ದಾರೆ. ಸಾಯಿಕುಮಾರ್​ ಕಂಚಿನ ಕಂಠದ ಮುಂದೆ ಅವರ ಧ್ವನಿ ಮತ್ತಷ್ಟು ಗಟ್ಟಿಯಾಗಿದ್ದರೆ ಸಿನಿಮಾ ಇನ್ನಷ್ಟು ಮಜವಾಗಿರುತ್ತಿತ್ತು. "ಅಗ್ನಿ ಐಪಿಎಸ್​', "ಪೊಲೀಸ್​ ಸ್ಟೋರಿ'ಯಲ್ಲಿ ಖಡಕ್​ ಖಾಕಿಯ ವಿಂಟೇಜ್​ ಸಾಯಿಕುಮಾರ್​ ಅನ್ನು "ದಿಲ್ಮಾರ್​' ವಿಲನ್​ ಸಾಯಿಕುಮಾರ್​ ನೆನಪಿಸುತ್ತಾರೆ.

"ಕೆಜಿಎಫ್​ ಚಾಪ್ಟರ್​ 1' ಸಂಭಾಷಣೆಕಾರ ಚಂದ್ರಮೌಳಿ ಚೊಚ್ಚಲ ಬಾರಿಗೆ ಆ್ಯಕ್ಷನ್​&ಕಟ್​ ಹೇಳಿರುವ "ದಿಲ್ಮಾರ್​'ನಲ್ಲಿ ಉತ್ತಮ ಡೈಲಾಗ್ಸ್​ ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ. ಅಂತಹ ಡೈಲಾಗ್ಸ್​ ಚಿತ್ರದಾದ್ಯಂತ ನೋಡಿಸಿಕೊಂಡು ಹೋಗುತ್ತವೆ. ಜತೆಗೆ ಭರ್ಜರಿ ಸಾಹಸ ಸನ್ನಿವೇಶಗಳು ಮಾಸ್​ ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಅದಿತಿ, ಹಯಾತಿ, ಶರತ್​ ಸೇರಿ ಎಲ್ಲರೂ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಹಾಡುಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಸಂಕಲನ ಚಿತ್ರಕ್ಕೆ ಪೂರಕವಾಗಿವೆ.