ರಾಮ್ ಗೋಪಾಲ್ ವರ್ಮಾ ಮತ್ತು ನಟಿ ಊರ್ಮಿಳಾ ಮಾತೋಂಡ್ಕರ್
- ಊರ್ಮಿಳಾ ಮಾತೋಂಡ್ಕರ್ ಮತ್ತು ರಾಮ್ ಗೋಪಾಲ್ ವರ್ಮಾ ನಡುವಿನ ಸಂಬಂಧ
- ಪತ್ರಕರ್ತೆಯ ಓಪನ್ ಟಾಕ್ನಿಂದ ಹೊರಬಿತ್ತು ವರ್ಷಗಳ ಬಳಿಕ ಸತ್ಯ
- ಹಿರಿಯ ಬಾಲಿವುಡ್ ಪತ್ರಕರ್ತೆ ಜ್ಯೋತಿ ವೆಂಕಟೇಶ್ ಆಡಿರುವ ಮಾತುಗಳು ವೈರಲ್
ಮುಂಬೈ: ವಿವಾದಗಳಿಂದಲೇ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅದು ಓರ್ವ ಹಿರಿಯ ಪತ್ರಕರ್ತೆಯ ಬಾಯಿಂದ ಹೊರಬಿದ್ದ ಸ್ಫೋಟಕ ಸತ್ಯದಿಂದ ಎಂಬುದು ಸದ್ಯ ನೆಟ್ಟಿಗರ ಹುಬ್ಬೇರಿಸಿದೆ.
ಸೆನ್ಸೇಷನಲ್ ನಟಿ
ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಸೆನ್ಸೇಷನಲ್ ನಟಿಯಾಗಿ ಮಿಂಚಿದ್ದ ಊರ್ಮಿಳಾ ಮಾತೋಂಡ್ಕರ್ ಮತ್ತು ರಾಮ್ ಗೋಪಾಲ್ ವರ್ಮಾ ನಡುವಿನ ಸಂಬಂಧದ ಬಗ್ಗೆ ಮತ್ತೆ ಹೊಸ ಚರ್ಚೆ ಭುಗಿಲೆದ್ದಿದೆ. ಅದು ಪತ್ರಕರ್ತೆಯ ಓಪನ್ ಟಾಕ್ನಿಂದ. ಇವರಿಬ್ಬರ ನಡುವೆ ಪ್ರೇಮ ಸಂಬಂಧವಿತ್ತು ಎಂಬ ಸುದ್ದಿ ದಶಕಗಳಿಂದ ಹರಿದಾಡುತ್ತಲೇ ಇತ್ತು. ಆದರೆ, ಎಲ್ಲಿಯೂ ನಿಖರವಾಗಿ ಅಥವಾ ಯಾವ ಮೂಲಗಳಿಂದ ದೃಢವಾಗಿ ತಿಳಿದುಬಂದಿರಲಿಲ್ಲ. ಈ ಕಾರಣದಿಂದ ಇದೊಂದು ವದಂತಿ ಊಹಾಪೋಹಗಳು ಎಂದೇ ಹಲವರು ಸುಮ್ಮನಾಗಿದ್ದರು. ಆದರೀಗ, ಹಿರಿಯ ಬಾಲಿವುಡ್ ಪತ್ರಕರ್ತೆ ಜ್ಯೋತಿ ವೆಂಕಟೇಶ್ ಆಡಿರುವ ಮಾತುಗಳು ಅಚ್ಚರಿ ಮೂಡಿಸಿದೆ.
ಸಿದ್ಧಾರ್ಥ್ ಕಾನನ್ ಅವರ ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ಈ ಕುರಿತು ಮುಕ್ತವಾಗಿ ಮಾತನಾಡಿದ ಜ್ಯೋತಿ ವೆಂಕಟೇಶ್, ನಾನು ರಾಮ್ ಗೋಪಾಲ್ ವರ್ಮಾ ಮತ್ತು ಊರ್ಮಿಳಾ ಬಗ್ಗೆ ಸುದ್ದಿಗಳನ್ನು ಬರೆಯುತ್ತಿದ್ದೆ. ಆದರೆ, ಇದಕ್ಕೆ ಇಬ್ಬರಿಂದಲೂ ನನಗೆ ಒತ್ತಡವಿತ್ತು. ಒಮ್ಮೆ ಚಿರಂಜೀವಿ ಅವರನ್ನು ಭೇಟಿಯಾಗಿದ್ದೆ. ಆ ಸಮಯದಲ್ಲಿ ಅವರು 'ಜಂಟಲ್‌ಮ್ಯಾನ್' ಸಿನಿಮಾ ಮಾಡುತ್ತಿದ್ದರು. ‘ಇಷ್ಟು ಚೆಂದ ಬರೆಯುತ್ತೀರಿ, ಆರ್ಜಿವಿ-ಊರ್ಮಿಳಾ ಮದುವೆಯಾಗಿದ್ದನ್ನು ಏಕೆ ಬರೆಯಲಿಲ್ಲ’ ಎಂದರು. ಅದನ್ನು ಕೇಳಿ ನನಗೆ ಶಾಕ್ ಆಯಿತು ಎಂದು ಹೇಳಿದರು.
ಅರ್ಚಕರ ಫೋನ್ ನಂಬರ್
ಇದರ ಕುರಿತಾಗಿ ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದಿದ್ದಕ್ಕೆ ಮದುವೆ ಆಂಧ್ರಪ್ರದೇಶದ ದೇವಾಲಯವೊಂದರಲ್ಲಿ ಗುಟ್ಟಾಗಿ ನಡೆದಿದೆ ಎಂದಿದ್ದಾಗಿ ಹೇಳಿದರು. ಈ ಜೋಡಿ ಮದುವೆಯಾದ ದೇಗುಲದ ಅರ್ಚಕರ ಫೋನ್ ನಂಬರ್ ಅನ್ನು ಕೊಟ್ಟು, ಹೆಚ್ಚಿನ ಮಾಹಿತಿ ಬೇಕಿದ್ದರೆ ಕರೆ ಮಾಡಿ ಕೇಳಿಕೊಳ್ಳಿ ಎಂದರು.
ಅಷ್ಟಕ್ಕೂ ಈ ಸುದ್ದಿ ಬರೆಯುವ ಮೊದಲು ನಾನು ಊರ್ಮಿಳಾಗೆ ಫೋನ್ ಮಾಡಿದ್ದೆ. ಆಕೆ ಸಂಭಾಷಣೆಯಲ್ಲಿ ಕಣ್ಣೀರಾಕಿದರು. ನನ್ನನ್ನು ಪ್ರಶ್ನಿಸಿದರು, "ನೀವು ನನ್ನನ್ನು ಎಷ್ಟು ದಿನದಿಂದ ನೋಡಿದ್ದೀರಿ? ಅಷ್ಟು ಸುಲಭವಾಗಿ ನನ್ನ ಬಗ್ಗೆ ಹೇಗೆ ಬರೆಯುತ್ತೀರಿ? ಎಂದರು. ಆಗ ನಾನು ರಾಮ್ ಗೋಪಾಲ್ ವರ್ಮಾಗೆ ಕಾಲ್ ಮಾಡಿದೆ. ಅವರು ಕಾಮೆಂಟ್ ಮಾಡಲಿಲ್ಲ. "ನಿಮ್ಮ ಹೆಂಡತಿ ಅಳುತ್ತಿದ್ದಾರೆ ಮತ್ತು ನೀವು ನಟಿಯೊಂದಿಗೆ ಸಂಬಂಧ ಹೊಂದಿರುವುದು ಸತ್ಯ ಅಲ್ಲವೇ ಎಂದೆ. ಇದಕ್ಕೆ ಆರ್ಜಿವಿ, ಅದರ ಬಗ್ಗೆ ಮಾತನಾಡಲು ಆಸಕ್ತಿಯಿಲ್ಲ" ಎಂದು ಕರೆ ಕಟ್ ಮಾಡಿದರು ಎಂದರು.
ಸಂಬಂಧ ಮುರಿದು ಹೋಗಿದ್ಯಾಕೆ?
ಊರ್ಮಿಳಾ ಮದುವೆಯಾಗಲು ನಿರಾಕರಿಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಜ್ಯೋತಿ ವೆಂಕಟೇಶ್, ಆಕೆ ಸುಮ್ಮನೆ ಅಳುತ್ತಿದ್ದಳು. ವಿವಾಹ ಆಗುವುದಕ್ಕೆ ನಿರಾಕರಿಸಲಿಲ್ಲ. ಆದರೆ, ಊರ್ಮಿಳಾ ರಾಮ್ ಗೋಪಾಲ್ ಅವರನ್ನು ಕಾನೂನುಬದ್ಧವಾಗಿ ಮದುವೆಯಾಗಲು ಬಯಸಿದ್ದರು. ಹೀಗಾಗಿ, ಅವರು ಮದುವೆಯಾಗಲಿಲ್ಲ. ಇದಾದ ಬಳಿಕ ಇಬ್ಬರೂ ಬೇರ್ಪಟ್ಟರು. ಅಷ್ಟಕ್ಕೂ, ಈ ಸುದ್ದಿಯನ್ನು ಸಮಯ ನೋಡಿಕೊಂಡು ಬ್ರೇಕ್ ಮಾಡಿದ್ದೇ ಚಿರಂಜೀವಿ ಎಂಬ ಸಂಗತಿ ಇವರಿಬ್ಬರಿಗೂ ಇಂದಿಗೂ ಗೊತ್ತಿಲ್ಲ ಎಂದು ಹೇಳಿದರು,(ಏಜೆನ್ಸೀಸ್).