ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ನಿರ್ದೇಶನಕ್ಕಿಳಿದ ಬಗ್ಗೆ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ಆ ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಟಿಸಲಿದ್ದಾರೆ ಎಂಬ ವಿಚಾರವನ್ನೂ ತಂಡ ಹೇಳಿಕೊಂಡಿತ್ತು. ಅದರಂತೆ ಇದೀಗ, ಆ ಸಿನಿಮಾ ಬಗ್ಗೆ ಹೊಸದಾದ ಮಾಹಿತಿ ಲಭ್ಯವಾಗಿದೆ. ನಾಯಕಿಯಾಗಿ ರಾಕುಲ್ ಪ್ರೀತ್ ಎಂಟ್ರಿಕೊಟ್ಟಿದ್ದಾರೆ.
ಈಗಾಗಲೇ ದಕ್ಷಿಣ ಭಾರತದ ಸಿನಿಮಾರಂಗದ ಜತೆಗೆ ಬಾಲಿವುಡ್ನಲ್ಲಿಯೂ ಹೆಸರು ಮಾಡುತ್ತಿದ್ದಾರೆ ನಟಿ ರಾಕುಲ್ ಪ್ರೀತ್. ಸದ್ಯ ಹಿಂದಿ ಸಿನಿಮಾಗಳಲ್ಲಿಯೇ ಹೆಚ್ಚು ತೊಡಗಿಸಿಕೊಂಡಿರುವ ಅವರು, ಇದೀಗ ಅಮಿತಾಬ್ ಬಚ್ಚನ್ ಜತೆಗೆ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಇದೇ ಚಿತ್ರದಲ್ಲಿ ಅಜಯ್ ದೇವಗನ್ ಸಹ ನಟಿಸುತ್ತಿರುವುದು ವಿಶೇಷ.
‘ಮೇಡೇ’ ಶೀರ್ಷಿಕೆಯ ಈ ಸಿನಿಮಾದಲ್ಲಿ ಸುದೀರ್ಘ 13 ವರ್ಷಗಳ ಬಳಿಕ ಅಮಿತಾಬ್ ಬಚ್ಚನ್ ಮತ್ತು ಅಜಯ್ ದೇವಗನ್ ಒಂದಾಗುತ್ತಿದ್ದಾರೆ. ಇತ್ತ ‘ದೇ ದೇ ಪ್ಯಾರ್ ದೇ’ ಸಿನಿಮಾದಲ್ಲಿ ಅಜಯ್ ಜತೆ ರಾಕುಲ್ ನಟಿಸಿದ್ದರು. ಇದೀಗ ಮೇಡೇ ಚಿತ್ರದಲ್ಲಿ ಮತ್ತೆ ಜತೆಯಾಗಿದ್ದಾರೆ. ಆದರೆ, ರಾಕುಲ್ಗಿದು ಅಮಿತಾಬ್ ಜತೆ ನಟಿಸುತ್ತಿರುವ ಮೊದಲ ಸಿನಿಮಾ. ನಟನೆ, ಮತ್ತು ನಿರ್ಮಾಣದ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನು ಅಜಯ್ ಹೊತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಹೈದರಾಬಾದ್ನಲ್ಲಿ ಈ ಚಿತ್ರದ ಚಿತ್ರೀಕರಣ ಶುರುವಾಗಲಿದೆ. (ಏಜೆನ್ಸೀಸ್)