ಬಾಲಿವುಡ್ ಸೇರಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಉತ್ತರಭಾರತ ಮೂಲದ ನಟಿ ರಾಕುಲ್ ಪ್ರೀತ್ ಸಿಂಗ್, ಈಗ ಲಾಕ್ಡೌನ್ನಿಂದ ಕಂಗೆಟ್ಟ ಜನರ ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಂದರೆ ನಿತ್ಯ 200 ಮನೆಗಳಿಗೆ ದಿನಕ್ಕೆ ಎರಡು ಹೊತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ. ಗುರುಗ್ರಾಮದ ಸುತ್ತಮುತ್ತಲಿನ ಕೊಳಗೇರಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದು, ಅಭಿಮಾನಿಗಳು ರಾಕುಲ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಸದ್ಯ ರಾಕುಲ್ ಗುರುಗ್ರಾಮದ ಮನೆಯಲ್ಲಿ ಕುಟುಂಬದೊಟ್ಟಿಗೆ ವಾಸವಾಗಿದ್ದಾರೆ. ಮನೆಯಿಂದ ಕೂಗಳತೆ ದೂರದಲ್ಲಿ ಸ್ಲಂ ಇದ್ದು, ಅಲ್ಲಿನ ನಿವಾಸಿಗಳಿಗೆ ಮನೆಯಲ್ಲಿಯೇ ಆಹಾರ ತಯಾರಿಸಿ ಆಹಾರ ಪೂರೈಕೆ ಮಾಡುವ ಕೆಲಸ ಜೋರಾಗಿ ನಡೆಯುತ್ತಿದೆ. "ನಮ್ಮ ತಂದೆ ಈ ಭಾಗವನ್ನು ಗುರುತಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಅವಶ್ಯಕ ಸಾಮಗ್ರಿಗಳ ಪೂರೈಕೆಯ ಜತೆಗೆ ಆಹಾರವೂ ಸಿಗುತ್ತಿಲ್ಲ. ಹಾಗಾಗಿ ನಿತ್ಯ ಎರಡು ಹೊತ್ತು ಊಟ ನೀಡುತ್ತಿದ್ದೇವೆ. ಲಾಕ್ಡೌನ್ ಮುಗಿಯುವ ವರೆಗೂ ಈ ಕಾರ್ಯ ಮುಂದುವರಿಯಲಿದ್ದು, ಅದಾದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ' ಎಂದಿದ್ದಾರೆ. ರಾಕುಲ್ ಈ ನಿರ್ಧಾರ ತೆಗೆದುಕೊಂಡ ಬಳಿಕ ಅವರ ಹಲವು ಅಭಿಮಾನಿಗಳೂ ಆಹಾರ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್)