ಕನ್ನಡದ ಚಿತ್ರರಂಗದಲ್ಲಿ ಕಡಿಮೆ ಸಮಯದಲ್ಲಿ ಮಿಂಚಿ ಮರೆಯಾದ ನಟಿ ಯಾರು ಎಂಬ ಪ್ರಶ್ನೆಗೆ ಸಿಗುವ ಮೊದಲ ಉತ್ತರ ರಕ್ಷಿತಾ. ಇಂದು ತಮ್ಮ ಹುಟ್ಟುಹಬ್ಬ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಕ್ಷಿತಾ, ಕನ್ನಡದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಮಿಂಚಿ ಮರೆಯಾದರು ಎನ್ನುವುದರ ಜತೆಗೆ, ಆಗಿನ ಕಾಲದ ಬಹುತೇಕ ಸ್ಟಾರ್ ನಟರ ಜತೆಗೆ ನಟಿಸಿದ ಹೆಗ್ಗಳಿಕೆ ಇದೆ.
ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್ ಮತ್ತು ನಟಿ ಮಮತಾ ರಾವ್ ಅವರ ಮಗಳಾದ ರಕ್ಷಿತಾ ಚಿತ್ರರಂಗದಲ್ಲಿದ್ದಿದ್ದು ಕೇವಲ ಐದೇ ಐದು ವರ್ಷ. ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸಿದ ಮೊದಲ ಚಿತ್ರ ‘ಅಪ್ಪು’ ಮೂಲಕ 2002ರಲ್ಲಿ ಎಂಟ್ರಿ ಕೊಟ್ಟವರು ಅವರು. ಇನ್ನು 2007ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ‘ತಾಯಿಯ ಮಡಿಲು’ ಅವರ ಕೊನೆಯ ಚಿತ್ರವಾಗಿತ್ತು. ಈ ಐದು ವರ್ಷಗಳಲ್ಲಿ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು ಅವರು.
ಕನ್ನಡದ ಬಹುತೇಕ ಸ್ಟಾರ್‌ಗಳ ಜತೆಗೆ
‘ಅಪ್ಪು’ ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾದ ರಕ್ಷಿತಾ ನಂತರದ ದಿನಗಳಲ್ಲಿ ಉಪೇಂದ್ರ (ಗೋಕರ್ಣ), ದರ್ಶನ್ (ಕಲಾಸಿಪಾಳ್ಯ, ಅಯ್ಯ, ಮಂಡ್ಯ, ಸುಂಟರಗಾಳಿ), ಸುದೀಪ್ (ಧಮ್, ಕಾಶಿ ್ರಮ್ ವಿಲೇಜ್, ಹುಬ್ಬಳ್ಳಿ), ಮುರಳಿ (ಯಶವಂತ್), ರವಿಚಂದ್ರನ್ (ಒಡುಟ್ಟಿದವಳು), ವಿಜಯ್ ರಾಘವೇಂದ್ರ (ಅವಳೇ ನನ್ನ ಗೆಳತಿ, ರಾಜೀವ್), ಆದಿತ್ಯ (ಲವ್, ಡೆಡ್ಲಿ ಸೋಮ) ಮುಂತಾದ ಸ್ಟಾರ್ ನಟರ ಜತೆಗೆ ನಟಿಸಿದರು.
ತೆಲುಗು-ತಮಿಳೀನಲ್ಲೂ ಬ್ಯುಸಿ ತಾರೆ
ಬರೀ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲೂ ಜ್ಯೂನಿಯರ್ ಎನ್‌ಟಿಆರ್ (ಆಂಧ್ರಾವಾಲ) ರವಿತೇಜ (ಈಡಿಯಟ್), ಮಹೇಶ್ ಬಾಬು (ನಿಜಂ), ನಾಗಾರ್ಜುನ (ಶಿವಮಣಿ), ಜಗಪತಿ ಬಾಬು (ಜಗಪತಿ) ಮುಂತಾದವರ ಜತೆಗೆ ನಟಿಸಿದರೆ, ತಮಿಳಿನಲ್ಲಿ ವಿಜಯ್ (ಮಧುರೈ) ಮತ್ತು ಸಿಂಬು (ಧಮ್) ಜತೆಗೆ ನಟಿಸಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಸ್ಟಾರ್‌ಗಳ ಜತೆಗೆ ನಟಿಸಿದ ನಟಿಯರು ಸಿಗುವುದೂ ಬಹಳ ಅಪರೂಪವೇ.
ಮದುವೆಯ ನಂತರ ಚಿತ್ರರಂಗಕ್ಕೆ ವಿದಾಯ
ಹೀಗೆ ಐದು ವರ್ಷಗಳಲ್ಲಿ ಚಿತ್ರರಂಗದಲ್ಲಿ ಸುಂಟರಗಾಳಿಯನ್ನೇ ಎಬ್ಬಿಸಿದ ರಕ್ಷಿತಾ, ‘ತಾಯಿಯ ಮಡಿಲು’ ನಂತರ ಯಾವ ಚಿತ್ರದಲ್ಲೂ ನಟಿಸಲಿಲ್ಲ. ಅಷ್ಟರಲ್ಲಾಗಲೇ ‘ಜೋಗಿ’ ಪ್ರೇಮ್ ಅವರನ್ನು ಪ್ರೀತಿಸಿದ್ದ ರಕ್ಷಿತಾ, ಅವರನ್ನು ಮದುವೆಯಾಗಿ ಚಿತ್ರರಂಗಕ್ಕೆ ವಿದಾಯ ಹೇಳಿದರು. ಕಳೆದ ವರ್ಷ ತಮ್ಮದೇ ನಿರ್ಮಾಣದ ‘ಐ ಲವ್ ಯೂ’ ಸಿನಿಮಾದ ಹಾಡೊಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ, ಮಿಕ್ಕಂತೆ ಇಷ್ಟು ವರ್ಷಗಳಲ್ಲಿ ಅವರು ಯಾವ ಚಿತ್ರಕ್ಕೂ ಬಣ್ಣ ಹಚ್ಚಲಿಲ್ಲ.
ಮುಂದುವರೆದ ಬಣ್ಣದ ಲೋಕದ ನಂಟು
ಹಾಗಂತ ಅವರು ಬಣ್ಣದ ಬದುಕಿನಿಂದ ದೂರ ಇದ್ದರು ಎಂದರ್ಥವಲ್ಲ. ಕಿರುತೆರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಹಲವು ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿರುವ ರಕ್ಷಿತಾ, ‘ಜೋಗಯ್ಯ’, ‘ಡಿಕೆ’ ಮತ್ತು ‘ಏಕ್ ಲವ್ ಯಾ’ ಸಿನಿಮಾಗಳನ್ನೂ ನಿರ್ಮಿಸಿದ್ದಾರೆ. ಈ ಮೂಲಕ ಬಣ್ಣದ ಲೋಕದ ನಂಟನ್ನು ಮುಂದುವರೆಸಿಕೊಂಡು ಬಂದಿದ್ದಾರೆ.