ಬೆಂಗಳೂರು: ರಕ್ಷಿತ್ ಶೆಟ್ಟಿ, ‘777 ಚಾರ್ಲಿ’ ಚಿತ್ರದ ಬಿಡುಗಡೆ ಸಿದ್ಧತೆಯಲ್ಲಿ ಬಿಜಿಯಾಗಿದ್ದಾರೆ. ಅದಾಗುತ್ತಲೇ ಕೆಲ ದಿನಗಳ ಬ್ರೇಕ್ ಪಡೆದು ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ, ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರಕ್ಕಾಗಿ ರಕ್ಷಿತ್ ಬರೋಬ್ಬರಿ 25 ಕೆಜಿ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ. ನಿನ್ನೆಯಷ್ಟೇ ಚಿತ್ರದ ರಕ್ಷಿತ್ ಶೆಟ್ಟಿ ಹೊಸ ಲುಕ್ ಬಿಡುಗಡೆಯಾಗಿದ್ದು, ನಿರ್ದೇಶಕ ಹೇಮಂತ್ ರಾವ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
‘ಮೊದಲರ್ಧ ಪೂರ್ಣಗೊಂಡಿದೆ. ಶೇಕಡಾ 70ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಸೆಕೆಂಡ್ ಹಾಫ್ ಚಿತ್ರೀಕರಣ ಬಾಕಿ ಇದೆ. ಎರಡು ಕಾಲಘಟ್ಟದಲ್ಲಿ ನಡೆಯುವ ಈ ಕಥೆಯಲ್ಲಿ ರಕ್ಷಿತ್ 24 ಮತ್ತು 35 ವರ್ಷದವರಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅವರು 35 ವರ್ಷದವರಾಗಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈಗ ಬಿಡುಗಡೆ ಆಗಿರುವುದು ಅವರ 10 ವರ್ಷಗಳ ನಂತರದ ಲುಕ್. ಜೂನ್ ಅಂತ್ಯಕ್ಕೆ ಅಥವಾ ಜುಲೈ ಮೊದಲ ವಾರದಲ್ಲಿ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಸುಮಾರು 50 ದಿನಗಳ ಕಾಲ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದೇವೆ. ಆಗಸ್ಟ್ ಕೊನೆಗೆ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಚಿತ್ರೀಕರಣ ಮುಗಿಯಲಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಹೇಮಂತ್ ರಾವ್. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ.