ಸಿನಿವಾಣಿ

ರಕ್ಷಿತ್​ ಶೆಟ್ಟಿ ಸಿಂಪಲ್​ ಹುಟ್ಟುಹಬ್ಬ ... ಏನ್​ ಗಿಫ್ಟ್​ ಸಿಗ್ತು ಗೊತ್ತಾ?

chetannadiger

ಸ್ಯಾಂಡಲ್​ವುಡ್​ನಲ್ಲಿ ಸಿಂಪಲ್​ ಸ್ಟಾರ್​ ಎಂದೇ ಹೆಸರಾಗಿರುವ ರಕ್ಷಿತ್​ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಲಾಕ್​ಡೌನ್​ ಸಮಯವನ್ನು ಬೆಂಗಳೂರಿನಲ್ಲಿ ತಮ್ಮ ಮುಂದಿನ ಚಿತ್ರಗಳ ಕಥೆ-ಚಿತ್ರಕಥೆಯಲ್ಲಿ ತೊಡಗಿಸಿಕೊಂಡಿದ್ದ ರಕ್ಷಿತ್​, ಹುಟ್ಟುಹಬ್ಬದ ಸಲುವಾಗಿ ತಮ್ಮ ಹುಟ್ಟೂರಾದ ಉಡುಪಿಗೆ ಹೋಗಿದ್ದಾರೆ. ಅಲ್ಲಿ ಮನೆಯವರ ಸಮ್ಮುಖದಲ್ಲಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ರಕ್ಷಿತ್​ ಅಭಿನಯದ 777 ಚಾರ್ಲಿ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಬಿಡುಗಡೆಯಾಗಿ, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯಬೇಕಿತ್ತು. ಆದರೆ, ಲಾಕ್​​ಡೌನ್​ನಿಂದಾಗಿ ಚಿತ್ರತಂಡದ ಪ್ಲಾನ್​ಗಳೆಲ್ಲಾ ಏರುಪೇರಾಯಿತು. ಹಾಗೆಯೇ, ರಕ್ಷಿತ್​ ಹೊಸ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮುಹೂರ್ತ ಸಹ ಇಷ್ಟರಲ್ಲಿ ನಡೆದು, ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಆದರೆ, ಲಾಕ್​ಡೌನ್​ನಿಂದಾಗಿ ಎಲ್ಲವೂ ಮುಂದಕ್ಕೆ ಹೋಗಿದೆ.

ಹಾಗಂತ, ಈ ಎರಡೂ ಚಿತ್ರಗಳನ್ನು ನಿರ್ಮಿಸುತ್ತಿರುವ ಪುಷ್ಕರ್​ ಮಲ್ಲಿಕಾರ್ಜುನಯ್ಯ ಸುಮ್ಮನಿಲ್ಲ. ರಕ್ಷಿತ್​ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿ, ಅವರಿಗೆ ಮತ್ತು ಅವರ ಅಭಿಮಾನಿಗಳಿಗೆ ಗಿಫ್ಟ್​ ಕೊಟ್ಟಿದ್ದಾರೆ. ಪ್ರಮುಖವಾಗಿ ರಕ್ಷಿತ್​ ಹುಟ್ಟುಹಬ್ಬದ ಸಲುವಾಗಿ ಲೈಫ್​ ಆಫ್​ ಧರ್ಮ ಎಂಬ 777 ಚಾರ್ಲಿ ಚಿತ್ರದ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಚಿತ್ರದ ಮೇಕಿಂಗ್​ ದೃಶ್ಯಗಳನ್ನು ಸೇರಿಸಲಾಗಿದ್ದು, ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿದೆ. ರಕ್ಷಿತ್​ ಸಹ ಈ ವಿಡಿಯೋವನ್ನು ಟ್ವೀಟ್​ ಮಾಡಿದ್ದು, ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು ರಕ್ಷಿತ್​ ಶೆಟ್ಟಿ ಹುಟ್ಟುಹಬ್ಬಕ್ಕೆ 777 ಚಾರ್ಲಿ ಮತ್ತು ಸಪ್ತ ಸಾಗರದಾಚೆ ಎಲ್ಲೋ ಚಿತ್ರತಂಡಗಳು, ಹೊಸ ಪೋಸ್ಟರ್​ ಬಿಡುಗಡೆ ಮಾಡಿ ಶುಭ ಕೋರಿವೆ. ಕಳೆದ ವರ್ಷ ರಕ್ಷಿತ್​ ಹುಟ್ಟುಹಬ್ಬದಂದು, ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್​ ಬಿಡುಗಡೆಯಾಗಿತ್ತು. ಈ ಬಾರಿ ಒಂದು ಮೇಕಿಂಗ್​ ವಿಡಿಯೋ ಮತ್ತು ಎರಡು ಪೋಸ್ಟರ್​ಗಳು ಬಿಡುಗಡೆಯಾಗಿರುವುದು ವಿಶೇಷ.

ಈ ಬಾರಿಯ ರಕ್ಷಿತ್​ ಹುಟ್ಟುಹಬ್ಬಕ್ಕೆ ಚಂದನವನದ ಹಲವು ಸೆಲೆಬ್ರಿಟಿಗಳು ಶುಭ ಕೋರಿರುವುದು ಇನ್ನೊಂದು ವಿಶೇಷ. ಪುನೀತ್​ ರಾಜಕುಮಾರ್​, ನೆನಪಿರಲಿ ಪ್ರೇಮ್​, ಹೇಮಂತ್​ ರಾವ್​, ಪುಷ್ಕರ್​ ಮಲ್ಲಿಕಾರ್ಜುನಯ್ಯ, ರಿಷಭ್​ ಶೆಟ್ಟಿ, ಅಜನೀಶ್​ ಲೋಕನಾಥ್​ ಸೇರಿದಂತೆ ಹಲವರು, ರಕ್ಷಿತ್​ ಶೆಟ್ಟಿಗೆ ಶುಭ ಹಾರೈಸಿದ್ದಾರೆ.