ಬೆಂಗಳೂರು : ದುನಿಯಾ ವಿಜಯ್ ಹಾಗೂ ನಿರ್ದೇಶಕ ಜಡೇಶ್ ಕೆ. ಹಂಪಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಲ್ಯಾಂಡ್‌ಲಾರ್ಡ್’. 90ರ ದಶಕದ ಕೋಲಾರ ಭಾಗದಲ್ಲಿ ನಡೆದ ಕಥೆಯಾಗಿದೆ. ಈ ಚಿತ್ರದ ತಾರಾಗಣವೇ ಬಹುವಿಶೇಷತೆ. ದುನಿಯಾ ವಿಜಯ್ ಜತೆಗೆ ಪುತ್ರಿ ರಿತನ್ಯಾ, ರಚಿತಾ ರಾಮ್, ಶಿಶಿರ್ ಬೈಕಾಡಿ ಮುಖ್ಯಭೂಮಿಕೆಯಲ್ಲಿದ್ದಾರೆ. ಇದೀಗ ನಟ ರಾಕೇಶ್ ಅಡಿಗ ಚಿತ್ರತಂಡ ಸೇರಿಕೊಂಡಿದ್ದಾರೆ. ಇತ್ತೀಚೆಗೆ ಅವರ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು, ತುಂಬಾ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ‘‘ಲ್ಯಾಂಡ್‌ಲಾರ್ಡ್’ ತಾಜಾ ಹಾಗೂ ನೈಜ ಕಥೆ. ಗಂಭೀರವಾದ ಸಾಮಾಜಿಕ ವಿಷಯದ ಮೇಲೆ ಬೆಳಕು ಚೆಲ್ಲುತ್ತಿದೆ. ಇಲ್ಲಿ ಜಮೀನ್ದಾರನ ಮಗನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಸೇರಿ ಇನ್ನು ಇಬ್ಬರ ಅಣ್ಣಂದಿರು ಇದ್ದಾರೆ. ಅದರಲ್ಲಿ ಒಬ್ಬರು ಅಭಿಷೇಕ್ ದಾಸ್. ಇನ್ನೊಬ್ಬರು ಯಾರು ಎನ್ನುವುದೇ ಸಸ್ಪೆನ್ಸ್. ದೈನಂದಿನ ಜೀವನದಲ್ಲಿ ನನ್ನದು ತುಂಬಾ ಸ್‌ಟಾ ವ್ಯಕ್ತಿತ್ವ. ಆದರೆ, ಇಲ್ಲಿ ನನ್ನದು ಗಡಸು ವ್ಯಕ್ತಿತ್ವ ಹಾಗೂ ಗಂಭೀರ ಸಂಭಾಷಣೆ. ಈವರೆಗೂ ನನ್ನನ್ನು ಇಂತಹ ಪಾತ್ರದಲ್ಲಿ ನೋಡಿಲ್ಲ. ಈ ಪಾತ್ರಕ್ಕಾಗಿ ಕೋಲಾರ ಭಾಗದ ಶೈಲಿಯ ಮಾತು ಕಲಿಯಬೇಕಾಗಿತ್ತು. ಅದಕ್ಕಾಗಿ ಅದೇ ಭಾಗದ ವರ್ತೂರು ಸಂತೋಷ್ ಮಾತಿನ ಅನುಕರಣೆ ಮಾಡಿದೆ. ಕೆಲ ದಿನ ವರ್ಕ್‌ಶಾಪ್ ನಡೆಸಿದೆವು. ಆಗ ಸ್ವಲ್ಪ ಸರಳ ಅನಿಸಿತು. ಈ ಕಥೆಗಾಗಿ ಸಂಪೂರ್ಣವಾಗಿ ನಾನು ತೊಡಗಿಸಿಕೊಂಡಿದ್ದೇನೆ. ಮುಂದೆ ಸಿಗುವ ಲಿತಾಂಶದ ಬಗ್ಗೆ ಕಾತರನಾಗಿದ್ದೇನೆ. ಪಾತ್ರ ಚಿಕ್ಕದಾದರೂ, ಆಳವಾದುದು. ಇದೇ ವೇಳೆ ವಿಜಯ್ ಸರ್ ಹತ್ತಿರ ಕೆಲಸ ಮಾಡುವ ಅವಕಾಶ ನನ್ನದಾಯಿತು. ಸ್ಟಾರ್‌ಡಮ್ ಇಲ್ಲದೇ, ತಮ್ಮನಂತೆ ನೋಡಿಕೊಂಡು ಸಾಕಷ್ಟು ಹೇಳಿಕೊಟ್ಟಿದ್ದಾರೆ’ ಎಂದು ನಟ ರಾಕೇಶ್ ಅಡಿಗ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ರಾಕೇಶ್ ಸದ್ಯ ‘ದಿಂಸೋಲ್’ ಚಿತ್ರದಲ್ಲಿ ನಟಿಸುತ್ತಿದ್ದು, ಡಿಸೆಂಬರ್ ಬಳಿಕ ಎರಡು ಚಿತ್ರಗಳು ಘೋಷಣೆಯಾಗಲಿವೆ.