ಸಿನಿವಾಣಿ

ಶೂಟಿಂಗ್ ಮುಗಿಸಿದ ರಾಜು ಜೇಮ್ಸ್​ ಬಾಂಡ್

lakshmihegde

‘ಫಸ್ಟ್ ರ‍್ಯಾಂಕ್ ರಾಜು’, ‘ರಾಜು ಕನ್ನಡ ಮೀಡಿಯಂ’ ಚಿತ್ರಗಳ ನಂತರ ನಟ ಗುರುನಂದನ್ ಇದೀಗ ‘ರಾಜು ಜೇಮ್ಸ್​ ಬಾಂಡ್’ ಆಗಿ ಬರುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದೆ. ಫೆಬ್ರವರಿ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿರುವ ಚಿತ್ರತಂಡ, ಇತ್ತೀಚೆಗೆ ಸುದ್ದಿಗೋಷ್ಠಿ ಮೂಲಕ ಮಾಧ್ಯಮಗಳ ಮುಂದೆ ಬಂದಿತ್ತು. ‘ಬಿಕಾಂ ಮುಗಿಸಿ, ಬ್ಯಾಂಕ್ ಮ್ಯಾನೇಜರ್ ಆಗಬೇಕೆಂಬ ಕನಸು ಇಟ್ಟುಕೊಂಡಿದ್ದ ರಾಜು, ಜೇಮ್ಸ್​ ಬಾಂಡ್ ಆದದ್ದು ಏಕೆ ಎನ್ನುವುದು ಸಸ್ಪೆನ್ಸ್. ಕಾಮಿಡಿ-ಥ್ರಿಲ್ಲರ್​ನ ಕಮರ್ಷಿಯಲ್ ಚಿತ್ರ ಇದು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲ ವಯೋಮಾನದವರಿಗೆ ಇಷ್ಟವಾಗುತ್ತದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ನಿರ್ದೇಶಕ ದೀಪಕ್ ಮಧುವನಹಳ್ಳಿ.

ಬಳ್ಳಾರಿಯ ಸಂಡೂರು ಹಾಗೂ ಲಂಡನ್​ನ ಕೆಲವು ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಅದರಲ್ಲೂ ಸೆಂಟ್ರಲ್ ಲಂಡನ್​ನಲ್ಲಿ ಶೂಟಿಂಗ್ ಮಾಡಿರುವುದು ಸಾಹಸವೇ ಸರಿ. ಅಲ್ಲಿ ‘ರಾಜು ಜೇಮ್್ಸ ಬಾಂಡ್’ ಚಿತ್ರ ಬಿಟ್ಟರೆ ಇದುವರೆಗೂ ಯಾವುದೇ ಕನ್ನಡ ಸಿನಿಮಾದ ಚಿತ್ರೀಕರಣ ಆಗಿಲ್ಲ ಎಂದು ಚಿತ್ರೀಕರಣದ ಸಂತಸ ಹಂಚಿಕೊಂಡರು ನಿರ್ವಪಕ ಮಂಜುನಾಥ್ ವಿಶ್ವಕರ್ಮ.

‘ಈ ಸಿನಿಮಾದ ಕಥೆ ಹೇಳಿದ್ದು ನಟ ಗುರುನಂದನ್. ನಾವು ಕೂಡ ಒಂದೊಳ್ಳೆಯ ಕಥೆ ಇರುವ ಚಿತ್ರವನ್ನು ನಿರ್ಮಾಣ ಮಾಡಬೇಕು ಅಂದುಕೊಂಡಿದ್ದೆವು. ಈ ಕಥೆ ಇಷ್ಟವಾಗಿದ್ದರಿಂದ ನಾವೇ ಬಂಡವಾಳ ಹಾಕಿದ್ದೇವೆ’ ಎಂದರು ಮತ್ತೊಬ್ಬ ನಿರ್ವಪಕರಾದ ಕಿರಣ್. ಕೆನಡಾದಲ್ಲಿ ನೆಲೆಸಿರುವ ಇವರು, ಅಲ್ಲಿ ಕನ್ನಡ ಸಿನಿಮಾಗಳ ವಿತರಣೆ ಹಾಗೂ ಪ್ರಮೋಷನ್ ಮಾಡುತ್ತಿದ್ದರಂತೆ. ನಟ ಗುರುನಂದನ್, ಛಾಯಾಗ್ರಾಹಕ ಮನೋಹರ್ ಜೋಷಿ ಚಿತ್ರೀಕರಣದ ಅನುಭವ ಹಂಚಿಕೊಂಡರು. ಇನ್ನು ಸಿನಿಮಾ ಬಿಡುಗಡೆಗೂ ಮೊದಲು ಅದ್ದೂರಿಯಾಗಿ ಆಡಿಯೋ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.