Rajinikanth Coolie : ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಹಾಗೂ ಅಭಿಮಾನಿಗಳ ನೆಚ್ಚಿನ ತಲೈವಾ ನಟ ರಜಿನಿಕಾಂತ್ ಅಭಿನಯದ ಹಾಗೂ ಖ್ಯಾತ ಯುವ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ಬಹುನಿರೀಕ್ಷಿತ ‘ಕೂಲಿ’ ಸಿನಿಮಾ ಇದೇ ಆಗಸ್ಟ್ 14ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ‘ಕೂಲಿ’ ಕ್ರೇಜ್ ಶುರುವಾಗಿದ್ದು, ಮುಂಗಡ ಬುಕ್ಕಿಂಗ್ಗಳ ಸಂಖ್ಯೆ ಭರ್ಜರಿಯಾಗಿವೆ. ಬಿಡುಗಡೆಗೂ ಮುನ್ನವೇ ಕೂಲಿ ಸಿನಿಮಾ ಸಖತ್ ಸದ್ದು ಮಾಡುತ್ತಿದೆ.
ಕೂಲಿ ಸಿನಿಮಾದ ಪ್ರಮುಖ ಹೈಲೈಟ್ಸ್ ಏನೆಂದರೆ, ಅದರ ತಾರಾ ಬಳಗ. ರಜಿನಿಕಾಂತ್ ಮಾತ್ರವಲ್ಲದೇ ವಿವಿಧ ಚಿತ್ರರಂಗದ ಸೂಪರ್ ಸ್ಟಾರ್ಗಳ ದಂಡೇ ಈ ಸಿನಿಮಾದಲ್ಲಿದೆ. ಬಾಲಿವುಡ್ನಿಂದ ಆಮೀರ್ ಖಾನ್, ಟಾಲಿವುಡ್ನಿಂದ ನಾಗಾರ್ಜುನ್, ಸ್ಯಾಂಡಲ್ವುಡ್ನಿಂದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಮಾಲಿವುಡ್ನಿಂದ ಶೌಬಿನ್ ಶಾಹೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಕೂಡ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರುತಿ ಹಾಸನ್ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿಶೇಷ ಹಾಡೊಂದಕ್ಕೆ ನಟಿ ಪೂಜಾ ಹೆಗ್ಡೆ ಸೊಂಟ ಬಳುಕಿಸಿದ್ದಾರೆ.
ಅಂದಹಾಗೆ, ಸ್ಟಾರ್ಗಳ ದಂಡೇ ಇರುವ ಈ ಸಿನಿಮಾದ ಬಜೆಟ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಬಿಗ್ ಬಜೆಟ್ನೊಂದಿಗೆ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ. ಹಾಗಾದರೆ, ಪ್ರತಿ ಕಲಾವಿದನಿಗೆ ಎಷ್ಟೆಷ್ಟು ಸಂಭಾವನೆ ನೀಡಲಾಗಿದೆ ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಈ ಬಗ್ಗೆ ನಿಖರವಾದ ಮಾಹಿತಿ ಇಲ್ಲವಾದರೂ ಕೆಲ ಸಿನಿ ಮೂಲಗಳು ನೀಡಿರುವ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ಸಾಕಷ್ಟು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಎನ್ಡಿಟಿವಿ ಕೂಡ ಈ ಕುರಿತು ವರದಿ ಮಾಡಿದ್ದು, ಯಾವ ನಟನಿಗೆ ಎಷ್ಟೆಷ್ಟು ಸಂಭಾವನೆ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.
ಬಹುನಿರೀಕ್ಷಿತ ಸಿನಿಮಾದಲ್ಲಿ ಸೂಪರ್‌ಸ್ಟಾರ್ ರಜಿನಿಕಾಂತ್ ದೇವ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿ ಮೂಲಗಳ ಪ್ರಕಾರ ಕೂಲಿ ಚಿತ್ರಕ್ಕಾಗಿ ರಜಿನಿ ಅವರು 200 ಕೋಟಿ ರೂಪಾಯಿಗಳ ಬೃಹತ್ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು 150 ರೂ. ಸಂಭಾವನೆ ಫಿಕ್ಸ್ ಮಾಡಲಾಗಿತ್ತು. ಆದರೆ, ಕೂಲಿ ಚಿತ್ರದ ದಾಖಲೆಯ ಪೂರ್ವ ಮಾರಾಟದ ಬಳಿಕ ನಿರ್ಮಾಪಕರು 150 ಕೋಟಿ ರೂ. ಸಂಭಾವನೆಯನ್ನು ಪರಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ 'ಕೂಲಿ' ಚಿತ್ರದಲ್ಲಿ ದರೋಡೆಕೋರ ದಹಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರಕ್ಕಾಗಿ 20 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ.
ಕೂಲಿ ಚಿತ್ರದಲ್ಲಿ ರಜಿನಿಕಾಂತ್ ಜೊತೆಗೆ ತೆಲುಗು ಸೂಪರ್‌ಸ್ಟಾರ್ ನಾಗಾರ್ಜುನ ಅವರನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅವರು ಸೈಮನ್ ಪಾತ್ರವನ್ನು ನಿರ್ವಹಿಸಿದ್ದು, ಅದಕ್ಕಾಗಿ 10 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ.
ಕೂಲಿ ಚಿತ್ರದಲ್ಲಿ ರಾಜಶೇಖರ್ ಪಾತ್ರದಲ್ಲಿ ನಟಿಸಿರುವ ಬಾಹುಬಲಿಯ ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್, 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಕೂಲಿ ಚಿತ್ರದಲ್ಲಿ ಕಲೀಷಾ ಪಾತ್ರದಲ್ಲಿ ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಅವರ ಸಂಭಾವನೆ 5 ಕೋಟಿ ರೂ. ಎಂದು ಹೇಳಲಾಗಿದೆ.
ಪ್ರೀತಿ ಪಾತ್ರದಲ್ಲಿ ನಟಿಸಿರುವ ಶ್ರುತಿ ಹಾಸನ್, ಕೂಲಿ ಚಿತ್ರದ ಅಭಿನಯಕ್ಕಾಗಿ 4 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ.
ಮೋನಿಕಾ ಹಾಡಿನಲ್ಲಿ ಸಖತ್ ಡ್ಯಾನ್ಸ್ ಮೂಲಕ ಚಿತ್ರ ಬಿಡುಗಡೆ ಮುನ್ನವೇ ಸಂಚಲನ ಮೂಡಿಸಿದರುವ ಮಲಯಾಳಂ ನಟ ಸೌಬಿನ್ ಶಾಹಿರ್, ದಯಾಳ್ ಪಾತ್ರದಲ್ಲಿ ನಟಿಸಿದ್ದು, ಅವರಿಗೆ 1 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ.
ನಿರ್ದೇಶಕ ಲೋಕೇಶ್ ಕನಗರಾಜ್ ವಿಚಾರಕ್ಕೆ ಬಂದರೆ, ಅವರಿಗೆ 50 ಕೋಟಿ ರೂ. ಸಂಭಾವನೆ ನೀಡಲಾಗಿದೆ. 2023ರಲ್ಲಿ ತೆರೆಕಂಡ ರಜನಿಕಾಂತ್ ಅವರ ಸೂಪರ್ ಹಿಟ್ ಜೈಲರ್ ಚಿತ್ರದ ನಂತರ ಮತ್ತೊಮ್ಮೆ ಅವರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಅನಿರುದ್ಧ್ ರವಿಚಂದರ್, 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ, ಕೂಲಿ ಸಿನಿಮಾ ಹೃತಿಕ್ ರೋಷನ್ ಮತ್ತು ಜೂ. ಎನ್ಟಿಆರ್ ನಟನೆಯ ವಾರ್ 2 ಸಿನಿಮಾ ಜೊತೆ ಸ್ಪರ್ಧೆಗೆ ಇಳಿಯಲಿದೆ. ಟ್ರೇಡ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, ಕೂಲಿ ಚಿತ್ರವು ಬಿಡುಗಡೆ ಮುನ್ನ ವ್ಯಾಪಾರದಲ್ಲಿ 14 ಕೋಟಿ ರೂ. ಗಳಿಸಿದ್ದು, ಅಯನ್ ಮುಖರ್ಜಿ ಅವರ ವಾರ್ 2 ಚಿತ್ರವನ್ನು ಹಿಂದಿಕ್ಕಿದೆ, ಆ ಚಿತ್ರವು ಮುಂಗಡ ಮಾರಾಟದಲ್ಲಿ 2.08 ಕೋಟಿ ರೂ. ಗಳಿಸಿದೆ. ಇನ್ನು ಕೂಲಿ ಸಿನಿಮಾ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 6 ಲಕ್ಷ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಬ್ಲಾಕ್ ಸೀಟುಗಳನ್ನು ಸೇರಿಸಿದರೆ ಪ್ರೀ ಬುಕ್ಕಿಂಗ್ ವ್ಯವಹಾರವೇ 20 ಕೋಟಿ ರೂ.ಗಳಿಗೆ ಹತ್ತಿರದಲ್ಲಿದೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)