ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಬೆಂಗಳೂರು: ನಿರ್ದೇಶಕರಾಗಿ 50 ವರ್ಷಗಳನ್ನು ಪೂರೈಸಿ ವೃತ್ತಿ ಜೀವನದ ಸುವರ್ಣ ಸಂಭ್ರಮದಲ್ಲಿರುವ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್&ಕಟ್ ಹೇಳಿರುವ ಕೊನೆಯ ಚಿತ್ರ "ರೆಬೆಲ್' ಬಿಡುಗಡೆಯಾಗಿದ್ದ 2015ರಲ್ಲಿ. ಅದಕ್ಕೂ ಮುನ್ನವೇ ಉಪೇಂದ್ರ ಮತ್ತು ರಮ್ಯಾ ನಟಿಸಿದ್ದ "ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ರಿಲೀಸ್ಗೆ ರೆಡಿಯಾಗಿತ್ತಾದರೂ, ಕಾರಣಾಂತರಗಳಿಂದ ಬೆಳಕು ಕಂಡಿರಲಿಲ್ಲ. ಇದೀಗ ದಶಕದ ಬಳಿಕ ಅವರು ನಿರ್ದೇಶಿಸಿರುವ ಎರಡು ಚಿತ್ರಗಳು ತೆರೆಗೆ ಬರಲು ರೆಡಿಯಾಗಿವೆ. "ರಕ್ತ ಕಾಶ್ಮೀರ' ಮತ್ತು "ವೀರ ಕಂಬಳ' ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿವೆ. "ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಶೀರ್ಷಿಕೆಯನ್ನೇ "ರಕ್ತ ಕಾಶ್ಮೀರ' ಎಂದು ಬದಲಿಸಲಾಗಿದೆ ಎಂಬ ಸುದ್ದಿಯಿದೆಯಾದರೂ, ಅದನ್ನು ಬಾಬು ಅವರು ಕಳೆದ ವರ್ಷವೇ ಅಲ್ಲಗಳೆದಿದ್ದರು. ಇದೇ ತಿಂಗಳು ಈ ಸಿನಿಮಾ ತೆರೆಗೆ ಬರಲಿದ್ದು, ಇತ್ತೀಚೆಗಷ್ಟೆ ಟ್ರೇಲರ್ ಬಿಡುಗಡೆ ಮಾಡಲಾಯಿತು.
"ಈ ವರ್ಷ ನನಗೆ ಬಹಳ ವಿಶೇಷ. ನಾನು ನಿರ್ದೇಶಕನಾಗಿ 50 ವರ್ಷಗಳಾಗಿವೆ. ಹಾಗೇ ನಾನು ನಿರ್ದೇಶಿಸಿರುವ ಎರಡು ಚಿತ್ರಗಳು ರಿಲೀಸ್ಗೆ ರೆಡಿಯಿವೆ. "ರಕ್ತ ಕಾಶ್ಮೀರ' ಟೈಟಲ್ ಹೇಳುವಂತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಮತ್ತು ಭಯೋತ್ಪಾದನೆಯ ವಿರುದ್ಧ ಸಮರ ಸಾರುವ ಕಥೆಯ ಚಿತ್ರ. ಭಯದ ವಾತಾವರಣವಿದ್ದರೂ ಪಿಓಕೆ ಹತ್ತಿರದ ಸಿಂಧೂ ನದಿ ದಂಡೆಯಲ್ಲಿ ಶೂಟಿಂಗ್ ನಡೆಸಿದ್ದೇವೆ. ಉಪೇಂದ್ರ ದ್ವಿಪಾತ್ರದಲ್ಲಿ ಹಾಗೂ ರಮ್ಯಾ ಆರು ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದು, ನಾಲ್ಕೆ$ದು ಬಾಲ ಕಲಾವಿದರು ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಕ್ಕಳಲ್ಲಿ ದೇಶದ ಕುರಿತು ಜಾಗೃತಿ ಮೂಡಿಸುವ ಚಿತ್ರವಿದು' ಎಂದು ಮಾಹಿತಿ ನೀಡಿದರು. ಆದಿತ್ಯ, "ನಾನು ಈ ಸಿನಿಮಾ ನಿರ್ಮಿಸಿದ್ದೇನೆ. 14 ಜನ ನಾಯಕರು ಆರು ದಿನಗಳ ಕಾಲ ಶೂಟಿಂಗ್ನಲ್ಲಿ ಒಟ್ಟಿಗೆ ಭಾಗಿಯಾಗಿದ್ದು ಮರೆಯಲಾಗದ ಅನುಭವ' ಎಂದರು.
ಕನ್ನಡ ಚಿತ್ರದಲ್ಲಿ ಬಹುತಾರಾಗಣದ ಚಿತ್ರಗಳು ಅಪರೂಪ. ಅದರಲ್ಲೂ ಮೂವರಿಗಿಂತ ಹೆಚ್ಚು ಸ್ಟಾರ್ಗಳು ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವುದು ಅಥವಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಬೆರಳೆಣಿಕೆಯಷ್ಟು ಮಾತ್ರ. ಆದರೆ, "ರಕ್ತ ಕಾಶ್ಮೀರ'ದಲ್ಲಿ ಬರೋಬ್ಬರಿ 14 ಸ್ಟಾರ್ಗಳು ನಟಿಸಿದ್ದಾರಂತೆ. "ವಿಷ್ಣುವರ್ಧನ್, ಅಂಬರೀಷ್, ಶ್ರೀನಾಥ್, ಶಿವರಾಜಕುಮಾರ್, ಪುನೀತ್, ಜಗ್ಗೇಶ್, ಉಪೇಂದ್ರ, ರಮೇಶ್ ಅರವಿಂದ್, ದರ್ಶನ್, ಜೈ ಜಗದೀಶ್, ಆದಿತ್ಯ, ರಾಕ್ಲೈನ್ ವೆಂಕಟೇಶ್ ಹೀಗೆ 14 ಮಂದಿ ನಾಯಕರು ಈ ಚಿತ್ರದಲ್ಲಿ ನಟಿಸಿರುವುದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು' ಎಂದು ಹೇಳಿಕೊಳ್ಳುತ್ತಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.