ಬೆಂಗಳೂರು: ಕನ್ನಡದ ‘ಶ್ರೀಕಂಠ’, ‘ಭರ್ಜರಿ’, ‘ಪಂಚತಂತ್ರ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ರಾಜ್ ದೀಪಕ್ ಶೆಟ್ಟಿ ಈಗ ಟಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ.
ಹೌದು, ಕೆಲ ತಿಂಗಳುಗಳ ಹಿಂದೆ ರಿಲೀಸ್ ಆಗಿದ್ದ ‘ಇಸ್ಮಾರ್ಟ್ ಶಂಕರ್’ ಚಿತ್ರದಲ್ಲಿ ಮುಖ್ಯ ಖಳನಾಗಿ ನಟಿಸಿದಾಗಿನಿಂದಲೂ ಅವರ ಖದರ್ ಬದಲಾಗಿದೆ. ಸದ್ಯ ಸುಕುಮಾರ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಶನ್ನಲ್ಲಿ ನಿರ್ವಣವಾಗುತ್ತಿರುವ ಹೊಸ ಚಿತ್ರಕ್ಕೆ ಅವರು ಖಳ ನಟರಾಗಿ ಆಯ್ಕೆಯಾಗಿದ್ದಾರೆ. ಇದರ ಜತೆಗೆ ಕಳೆದ ವರ್ಷ ತಮಿಳಿನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಧನುಷ್ ಅಭಿನಯದ ‘ಅಸುರನ್’ನ ತೆಲುಗಿಗೆ ತೀಮೇಕ್ ಆಗುತ್ತಿದ್ದು, ‘ನಾರಪ್ಪ’ ಎಂಬ ಚಿತ್ರದಲ್ಲಿಯೂ ದೀಪಕ್ ಒಂದು ಪ್ರಮುಖ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.
ಈಗಾಗಲೇ ‘ನಾರಪ್ಪ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ರಾಜ್ ಈ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ. ‘ನನ್ನ ಕರಿಯರ್ ಗ್ರಾಫ್ ಬಹಳ ಚೆನ್ನಾಗಿದೆ. ಇತ್ತೀಚೆಗೆ ಒಳ್ಳೊಳ್ಳೆಯ ಪಾತ್ರಗಳು ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಅಲ್ಲು ಅರ್ಜುನ್ ಅವರ ಚಿತ್ರದಲ್ಲಿನ ಪಾತ್ರವೂ ಬಹಳ ಚೆನ್ನಾಗಿದೆ. ‘ನಾರಪ್ಪ’ದಲ್ಲಿ ವಿಲನ್ನ ಸಹೋದರನ ಪಾತ್ರದಲ್ಲಿದ್ದೇನೆ. ಎರಡು ಚಿತ್ರಗಳು ನನ್ನ ಕರಿಯರ್ಗೆ ಪ್ಲಸ್ ಆಗಲಿವೆ. ಇದರ ಜತೆಗೆಯಲ್ಲಿ ರಾಣ ದಗ್ಗುಬಾಟಿ ಜತೆ ‘ವಿರಾಟ ಪರ್ವ’ದಲ್ಲಿಯೂ ಮುಖ್ಯ ಪಾತ್ರದಲ್ಲಿದ್ದೇನೆ.
ಇನ್ನೊಂದು ವಿಶೇಷ ಎಂದರೆ ಎರಡು ಚಿತ್ರಗಳಲ್ಲಿ ಕಥೆ ರೆಟ್ರೋ ಯುಗದಲ್ಲಿ ನಡೆಯುತ್ತದೆ. ಕನ್ನಡದಲ್ಲಿಯೂ ಒಂದಷ್ಟು ಕಥೆಗಳನ್ನು ಕೇಳಿದ್ದೇನೆ’ ಎನ್ನುತ್ತಾರೆ ರಾಜ್ ದೀಪಕ್ ಶೆಟ್ಟಿ. ಯೋಗರಾಜ್ ಭಟ್ ಅವರ ‘ಪಂಚತಂತ್ರ’ ಸಿನಿಮಾದಲ್ಲಿನ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಜತೆಗೆ ಇತ್ತೀಚೆಗೆ ಅವರು ‘ಜಿಓಡಿ’ ಎಂಬ ವೆಬ್ ಸೀರಿಸ್ನಲ್ಲಿಯೂ ನಟಿಸಿದ್ದರು. ಆ ವೆಬ್ ಸೀರಿಸ್ನ ಪಾತ್ರ ಕೂಡ ಇವರ ಖ್ಯಾತಿಯನ್ನು ಕೊಂಚ ಜಾಸ್ತಿ ಮಾಡಿದೆ. ಸದ್ಯ ಹೈದರಾಬಾದ್, ಬೆಂಗಳೂರು ಎಂದು ಓಡಾಡುತ್ತಿರುವ ಈ ನಟ ತೆಲುಗಿನ ಇನ್ನಷ್ಟು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೋಟಿಗೊಬ್ಬ-3, ಫೈಟರ್, ಅರ್ಜುನ್ ಗೌಡ, ಗಡಿಯಾರ ಸೇರಿದಂತೆ ಒಂದಷ್ಟು ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಬೇಕಿದೆ.