ಚಿತ್ರ : ಹಿರಣ್ಯ
ನಿರ್ದೇಶನ : ಪ್ರವಿಣ್ ಅವ್ಯುಕ್ತ
ನಿರ್ಮಾಣ: ವಿಘ್ನೇಶ್ವರ ಮತ್ತು ವಿಜಯ್
ತಾರಾಗಣ: ರಾಜವರ್ಧನ್, ರಿಹಾನಾ, ದಿಲೀಪ್ ಶೆಟ್ಟಿ, ದಿವ್ಯಾ ಸುರೇಶ್, ಹುಲಿ ಕಾರ್ತಿಕ್, ಅರವಿಂದ್ ರಾವ್ ಮುಂತಾದವರು
| ಹರ್ಷವರ್ಧನ್ ಬ್ಯಾಡನೂರು
ಕಾರು ಅಪಘಾತಕ್ಕೊಳಗಾದ ಗರ್ಭಿಣಿಗೆ ಸಹಾಯ ಮಾಡುವ ಹಿಟ್ಮ್ಯಾನ್ ರಾಣಾಗೆ (ರಾಜವರ್ಧನ್), ಆ ಮಹಿಳೆ, "ಅಣ್ಣಾ, ನಮ್ಮ ಮಗೂಗೆ ನಿಮ್ಮ ಹೆಸರನ್ನಿಡಬೇಕು, ನಿಮ್ಮ ಹೆಸರೇನಣ್ಣಾ?' ಎಂದು ಕೇಳುತ್ತಾಳೆ. ಅದಕ್ಕೆ ರಾಣಾ, "ಯಾರಾದ್ರೂ ಸಾಧನೆ ಮಾಡಿರೋರ ಹೆಸರಿಡು, ಕಾಸಿಗೋಸ್ಕರ ಸಾಯಿಸೋ ಕ್ರಿಮಿನಲ್ ಹೆಸರನ್ನಲ್ಲ' ಅಂತಾನೆ. ಕಾರಣ, ಹೆಣ ಉರುಳಿಸಿ, ಹಣ ಎಣಿಸೋ ಒಬ್ಬ ಹಿಟ್ಮ್ಯಾನ್ ಅರ್ಥಾತ್ ಸುಪಾರಿ ಕಿಲ್ಲರ್ ಈ ರಾಣಾ. ಆತನಿಗೆ ಒಂದು ಮಗುವನ್ನು ಕೊಲ್ಲುವ ಸುಪಾರಿ ಸಿಗುತ್ತದೆ. ಆ ಮಗುವಿನಿಂದಲೇ ರಾಣಾನ ಕಲ್ಲು ಮನಸ್ಸು ಕರಗುತ್ತದೆ. ಕೊಲ್ಲಲು ಬಂದವನೇ ಅದರ ರಕ್ಷಣೆಗಿಳಿಯುತ್ತಾನೆ. ಹಾಗಾದರೆ ಆ ಮಗುವನ್ನು ಕೊಲ್ಲಲು ಸುಪಾರಿ ಕೊಟ್ಟವರು ಯಾರು? ಅದಕ್ಕೆ ಕಾರಣವೇನು? ಅಲ್ಲೊಂದು ಪ್ರೇಮಕಥೆಯಿದೆ, ಸೇಡಿನ ಕಿಚ್ಚಿದೆ, ಚೇಸ್, ಆ್ಯಕ್ಷನ್, ಎಮೋಷನ್ಸ್… ಹೀಗೆ ಹಂತಹಂತವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ.
ಸ್ಯಾಂಡಲ್ವುಡ್ನ ಆರಡಿ ಮೀರಿದ ಕಟೌಟ್ಗಳಲ್ಲಿ ರಾಜವರ್ಧನ್ ಕೂಡ ಒಬ್ಬರು. ಕಿಲ್ಲರ್ ರಾಣಾ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಆ್ಯಕ್ಷನ್ಗಳಲ್ಲಿ ಮಿಂಚಿದ್ದಾರೆ. ರಿಹಾನಾ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಹುಲಿ ಕಾರ್ತಿಕ್ ಅಲ್ಲಲ್ಲಿ ನಗಿಸುತ್ತಾರೆ. ದಿವ್ಯಾ ಸುರೇಶ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಐಪಿಎಸ್ ಅಧಿಕಾರಿ ದಿಲೀಪ್ ಕುಮಾರ್ ಪಾತ್ರದಲ್ಲಿ "ನೀನಾದೆ ನಾ' ಧಾರಾವಾಹಿ ಖ್ಯಾತಿಯ ದಿಲೀಪ್ ಶೆಟ್ಟಿ ಸರ್ಪೆಸ್ ಪ್ಯಾಕೇಜ್. ಚೊಚ್ಚಲ ಪ್ರಯತ್ನದಲ್ಲೇ ನಿರ್ದೇಶಕ ಪ್ರವಿಣ್ ಒಂದೊಳ್ಳೆ ಕಮರ್ಷಿಯಲ್ ಸಿನಿಮಾ ಮಾಡಿದ್ದಾರೆ. ಮೊದರ್ಲಧ ಕೆಲವೆಡೆ ನಿಧಾನ ಎನಿಸಿದರೂ ದ್ವೀತಿಯಾರ್ಧ ರ್ಟನ್ ಟ್ವಿಸ್ಟ್ಗಳ ಮೂಲಕ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತಾರೆ. ಜೂಡಾ ಸ್ಯಾಂಡಿ ಸಂಗೀತದ ಹಾಡುಗಳಲ್ಲಿ "ಪದೇ ಪದೆ' ಇಷ್ಟವಾಗುತ್ತದೆ. ಯೋಗೇಶ್ವರನ್ ಆ್ಯಕ್ಷನ್ ಕೆಮ್ ಡ್ರಾಮಾ ಕಥೆಯನ್ನು ಕ್ಯಾಮರಾದಲ್ಲಿ ರಿಚ್ಚಾಗಿ ಸೆರೆಹಿಡಿದಿದ್ದಾರೆ. ಹೀಗಾಗಿಯೇ "ಹಿರಣ್ಯ' ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ.