ಬೆಂಗಳೂರು: ‘ಓರಿಯೋ’- ಹೀಗೆಂದ ಕೂಡಲೇ ನಿಮಗೆ ಬಿಸ್ಕಟ್ ನೆನಪಿಗೆ ಬರಬಹುದು. ಆದರೆ, ನಿರ್ದೇಶಕ ನಂದನ್ ಪ್ರಭು, ‘ಓರಿಯೋ’ ಅಂದರೆ ಅದಲ್ಲ, ಬೇರೇನೋ ಇದು ಎಂದು ಹೇಳಹೊರಟಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತವೂ ನೆರವೇರಿದ್ದು, ನಾಯಕನಾಗಿ ನಿತಿನ್ ನಟಿಸುತ್ತಿದ್ದರೆ, ರಾಜಸ್ಥಾನ ಮೂಲದ ಹುಡುಗಿಯನ್ನು, ಈ ಸಿನಿಮಾ ಮೂಲಕ ಅವರು ನಾಯಕಿಯನ್ನಾಗಿ ಪರಿಚಯಿಸುತ್ತಿದ್ದಾರೆ.
ರಾಜಸ್ಥಾನದಲ್ಲಿ ಹುಟ್ಟಿ, ಸದ್ಯ ಬೆಂಗಳೂರಿನಲ್ಲಿ ಮಾಡೆಲಿಂಗ್ ಮತ್ತು ಟಿವಿ ಜಾಹೀರಾತುಗಳಲ್ಲಿ ಗುರುತಿಸಿಕೊಂಡಿರುವ ಶುಭಿ, ಮೊದಲ ಚಿತ್ರದಲ್ಲೇ ಹಲವು ಭಾಷೆಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಿ ಬಿಡುಗಡೆಯಾಗಲಿದೆ ಎನ್ನುವುದು ವಿಶೇಷ.
ಗೋವಿಂದ, ಲತಾ, ಸುಚಿತ್ ಸೇರಿ ಬಹುತೇಕ ಹೊಸ ಕಲಾವಿದರೇ ಚಿತ್ರದಲ್ಲಿದ್ದಾರೆ. ಶಿವಾಂಜನೇಯ ಪ್ರೊಡಕ್ಷನ್ಸ್ ಈ ಚಿತ್ರ ನಿರ್ವಿುಸುತ್ತಿದೆ. ಬ್ಯಾಟಪ್ಪ ಗೌಡ ಛಾಯಾಗ್ರಹಣ, ಸಾಯಿಕಿರಣ್ ಸಂಗೀತ ನೀಡುತ್ತಿದ್ದಾರೆ.