ಸಿನಿವಾಣಿ

ಭಾರತದಲ್ಲಿ ನಾನೇ ಸರ್ವಾಧಿಕಾರಿ ಎಂದ ರಾಜಮೌಳಿ …

ಲಾಸ್​ ಆಂಜಲೀಸ್​: ಟಾಲಿವುಡ್​ನ ಜನಪ್ರಿಯ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಕಳೆದ ಒಂದು ತಿಂಗಳಿನಿಂದ ಅಮೆರಿಕಾದಲ್ಲಿ ಬೀಡು ಬಿಟ್ಟಿದ್ದಾರೆ. ಆಸ್ಕರ್​ ಪ್ರಶಸ್ತಿಗೆ 'RRR' ಚಿತ್ರವು ಹಲವು ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದು, ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆ ಇದೆ.

ಈ ಮಧ್ಯೆ, ಹಾಲಿವುಡ್​ ಚಿತ್ರವೊಂದನ್ನು ರಾಜಮೌಳಿ ನಿರ್ದೇಶಿಸುವ ಸಾಧ್ಯತೆ ಇದೆ ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತಿದೆ. ಮಾರ್ವೆಲ್​ ಸಂಸ್ಥೆಯ ಬಾಸ್​ ಕೆವಿನ್​ ಫೀಜ್​, ರಾಜಮೌಳಿಗೆ ಒಂದು ಆಪರ್​ ಕೊಟ್ಟಿದ್ದು, ಮಾರ್ವಲ್​ ಕಾಮಿಕ್ಸ್​ ಆಧಾರಿತ ಚಿತ್ರವೊಂದನ್ನು ನಿರ್ದೇಶಿಸಿ ಕೊಡುವಂತೆ ಹೇಳಿದ್ದಾರೆ ಎಂಬ ಸುದ್ದಿಯೊಂದು ಕಳೆದ ವರ್ಷ ಹರಿದಾಡಿತ್ತು. ಈ ಸುದ್ದಿಗೆ ರಾಜಮೌಳಿ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಪುನಃ ಇಂಥದ್ದೊಂದು ಗುಸುಗುಸು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜಮೌಳಿ ಅವರ ಪ್ರತ್ರಿಕ್ರಿಯೆಯನ್ನು ಕೇಳಲಾಗಿದೆ.

ಇದಕ್ಕೆ ಉತ್ತರಿಸಿರುವ ಅವರು, 'ಭಾರತದಲ್ಲಿ ನಾನೇ ಸರ್ವಾಧಿಕಾರಿ. ಒಂದು ಸಿನಿಮಾ ಹೇಗೆ ಮಾಡಬೇಕೆಂದು ನನಗೆ ಯಾರು ಹೇಳುವುದಿಲ್ಲ. ಇಲ್ಲಿ ಚಿತ್ರ ಮಾಡುವ ಪ್ರಕ್ರಿಯೆ ಬೇರೆ ತರಹ ಇದೆ. ಜಗತ್ತಿನಾದ್ಯಂತ ಪ್ರತಿಯೊಬ್ಬ ನಿರ್ದೇಶಕನಿಗೂ ಒಂದು ಹಾಲಿವುಡ್​ ಚಿತ್ರ ನಿರ್ದೇಶಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ನನಗೂ ಇದೆ. ಆದರೆ, ಇಲ್ಲಿ ಪ್ರಕ್ರಿಯೆ ಬೇರೆ ರೀತಿ ಇರುವುದರಿಂದ, ಬೇರೆಯವರ ಸಹಯೋಗದೊಂದಿಗೆ ಚಿತ್ರ ಮಾಡಬೇಕಾಗುತ್ತದೆ. ಪ್ರಯೋಗಕ್ಕೆ ನಾನು ಯಾವತ್ತೂ ಸಿದ್ಧ' ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಮುಂದೊಂದು ದಿನ ಹಾಲಿವುಡ್​ ಚಿತ್ರವೊಂದನ್ನು ನಿರ್ದೇಶಿಸುವ ಸಾಧ್ಯತೆ ಇದೆ ಎಂದು ಹಿಂಟ್​ ಕೊಟ್ಟಿದ್ದಾರೆ.

ಅಂದಹಾಗೆ, 'RRR' ಚಿತ್ರವು ಇತ್ತೀಚೆಗಷ್ಟೇ 28ನೇ ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ನ ಅತ್ಯುತ್ತಮ ವಿದೇಶಿ ಭಾಷೆಯ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ. ಜತೆಗೆ, 'ನಾಟು ನಾಟು' ಹಾಡಿಗೆ ಅತ್ಯುತ್ತಮ ಗೀತೆ ಪ್ರಶಸ್ತಿ ದೊರೆತಿದೆ.