ಹೈದರಾಬಾದ್; ಆಸ್ಕರ್ ಕಣದಲ್ಲಿ ಸ್ಪರ್ಧಿಸುವುದರ ಜತೆಗೆ ಒಂದೆರೆಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳಬೇಕೆಂದು ರಾಜಮೌಳಿ ನಿರ್ದೇಶನದ 'ಆರ್.ಆರ್.ಆರ್' ಚಿತ್ರತಂಡ ಸಾಕಷ್ಟು ಪ್ರಯತ್ನ ನಡೆಸಿದೆ. ಈ ಮಧ್ಯೆ, ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳ ಎರಡು ವಿಭಾಗಗಳಿಗೆ ಚಿತ್ರವು ನಾಮಿನೇಟ್ ಆಗಿದ್ದು. ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿ ಚಿತ್ರತಂಡವಿದೆ.
'ಆರ್.ಆರ್.ಆರ್' ಚಿತ್ರವು ಈ ಬಾರಿಯ ಗೋಲ್ಡನ್ ಗ್ಲೋಬ್ ಕಣದಲ್ಲಿ ಅತ್ಯುತ್ತಮ ಚಿತ್ರ (ನಾನ್ ಇಂಗ್ಲೀಷ್ ಚಿತ್ರ) ಮತ್ತು ಅತ್ಯುತ್ತಮ ಹಾಡು (ನಾಟ್ಟು ನಾಟ್ಟು) ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧಿಸಲಿದೆ. ಸೋಮವಾರ ರಾತ್ರಿ ಈ ಕುರಿತು ಗೋಲ್ಡನ್ ಗ್ಲೋಬ್ನಿಂದ ಅಧಿಕೃತ ಘೋಷಣೆಯಾಗಿದೆ.
ಘೋಷಣೆಯ ನಂತರ ಪ್ರಶಸ್ತಿಗೆ ನಾಮಿನೇಟ್ ಆಗಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಂತೋಷ ವ್ಯಕ್ತಪಡಿಸಿರುವ ರಾಜಮೌಳಿ, 'ನಮ್ಮ ಚಿತ್ರವನ್ನು ಎರಡು ವಿಭಾಗಗಳಲ್ಲಿ ಆಯ್ಕೆ ಮಾಡಿರುವ ಗೋಲ್ಡನ್ ಗ್ಲೋಬ್ ಆಯ್ಕೆ ಸಮಿತೆಗೆ ಧನ್ಯವಾದಗಳು. ಪ್ರೇಕ್ಷಕರು ಮತ್ತು ಅಭಿಮಾನಿಗಳು ನಮಗೆ ತೋರಿಸಿರುವ ಪ್ರೀತಿಗೆ ನಾನು ಯಾವತ್ತೂ ಚಿರಋಣಿ' ಎಂದು ಬರೆದುಕೊಂಡಿದ್ದಾರೆ.
ಇನ್ನು, ಆಸ್ಕರ್ ಪ್ರಶಸ್ತಿಗೆ ಈ ಚಿತ್ರ ಒಟ್ಟು 15 ವಿಭಿನ್ನ ವಿಭಾಗಗಳಿಗೆ ನಾಮನಿರ್ದೇಶನಗೊಂಡಿದೆ. ಇದಕ್ಕೂ ಮುನ್ನ, 'ಆರ್.ಆರ್.ಆರ್' ಚಿತ್ರದ ನಿರ್ದೇಶನಕ್ಕೆ ರಾಜಮೌಳಿ ಅವರಿಗೆ ಪ್ರತಿಷ್ಠಿತ ನ್ಯೂಯಾರ್ಕ್ ಫಿಲಂ ಕ್ರಿಟಿಕ್ಸ್ ಸರ್ಕಲ್ನಿಂದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.