ಚಿತ್ರ: ರಾಜ ರತ್ನಾಕರ
ನಿರ್ದೇಶನ: ವೀರೇಶ್ ಬೊಮ್ಮಸಾಗರ
ತಾರಾಗಣ: ಚಂದನ್ ರಾಜ್, ವಿದ್ಯಾಶ್ರೀ, ಯಮುನಾ ಶ್ರೀನಿಧಿ, ನಾಗರಾಜ್ ರಾವ್, ಚೇತನ್ ದುರ್ಗಾ, ಡಿಂಗ್ರಿ ನರೇಶ್ ಮತ್ತಿತರರು
ಶಿವ ಸ್ಥಾವರಮಠ
‘ದುಡ್ಡಿಲ್ಲದಿದ್ದರೇನು, ದೌಲತ್‌ಗೇನೂ ಕಡಿಮೆಯಿಲ್ಲ’ ಎಂಬಂತೆ ವರ್ತಿಸುವವರು ನಮ್ಮ ಮುಂದೆ ಸಾಕಷ್ಟು ಜನ ಇರುತ್ತಾರೆ. ಏನಿಲ್ಲದಿದ್ದರೂ ಅಹಂಕಾರಕ್ಕೇನೂ ಕಡಿಮೆಯಿಲ್ಲ. ಅವರು ಯಾವ ಸಂಬಂಧಗಳಿಗೂ ಬೆಲೆ ನೀಡುವವರಲ್ಲ. ಸೊಕ್ಕು ಅವರನ್ನು ಗಗನಕ್ಕೇರಿಸಿ, ಕೊನೆಗೊಂದು ದಿನ ಪಾತಾಳಕ್ಕಿಳಿಸಿ ಬಿಡುತ್ತದೆ. ಆಗ ಬದುಕು ಅವರಿಗೆ ಹಲವು ರೀತಿಯಲ್ಲಿ ಪಾಠ ಕಲಿಸಿಬಿಡುತ್ತದೆ. ಅಷ್ಟರೊಳಗೆ ತಾವು ಕಟ್ಟಿದ್ದ ಬಂಧನದ ಕೊಂಡಿ ಕಳಚಿರುತ್ತದೆ ಎಂಬುದನ್ನು ಮಾರ್ಮಿಕವಾಗಿ ಹೇಳುವ ಕಥೆಯೇ ‘ರಾಜ ರತ್ನಾಕರ’.
ಆತ ರಾಜ (ಚಂದನ್ ರಾಜ್) ದುಡಿಯದೆ ಉಡಾಳನಾಗಿದ್ದರೂ, ದೌಲತ್‌ನಲ್ಲಿ ಬದುಕುವವ. ತಾಯಿ, ತಾತನ ಶ್ರಮಕ್ಕೆ ಒಂದು ದಿನವೂ ಮರುಗದ ಆತ ಅವರ ಸಂಪಾದನೆಯನ್ನು ಕಿತ್ತುಕೊಂಡು ಶೋಕಿ ಜೀವನ ನಡೆಸುತ್ತಿರುತ್ತಾನೆ. ಅವನಿಗೆ ಅವನಂತೆಯೇ ಇಬ್ಬರು ಸ್ನೇಹಿತರು. ಮೂವರೂ ಸೇರಿ ಸಣ್ಣ ಪುಟ್ಟ ಗಲಾಟೆ ಮಾಡಿಕೊಂಡೆ ಮೋಜಿನಲ್ಲೇ ಜೀವನ ಕಳೆಯುತ್ತಿರುತ್ತಾರೆ. ರಾಜನಿಗೆ ಹುಡುಗಿಯೊಬ್ಬಳ (ವಿದ್ಯಾಶ್ರೀ) ಮೇಲೆ ಪ್ರೀತಿ ಚಿಗುರೊಡೆದು, ಆಕೆಯ ಹಿಂದೆ ತಿರುಗಲಾರಂಭಿಸುತ್ತಾನೆ. ಆತನಿಂದ ತಪ್ಪಿಸಿಕೊಳ್ಳಲು ಆಕೆ ರಾಜನಿಗೊಂದು ಟಾಸ್ಕ್ ನೀಡುತ್ತಾಳೆ. ಆ ಟಾಸ್ಕ್ ರಾಜನಿಗೆ ಜೀವನ ಪಾಠ ಕಲಿಸುತ್ತದೆ. ದುಡಿಮೆಯ ಅರ್ಥ ತಿಳಿಸುತ್ತದೆ. ಕೊನೆಗೆ ತಾಯಿಯ ಪ್ರೀತಿ, ಸ್ನೇಹದ ಮೌಲ್ಯ ಅರ್ಥ ಮಾಡಿಸುತ್ತದೆ. ಹಾಗಾದರೆ, ನಾಯಕಿ ನೀಡುವ ಟಾಸ್ಕ್ ಏನು? ತಿಳಿಯಲು ‘ರಾಜ ರತ್ನಾಕರ’ ನೋಡಬೇಕು.
ನಿರ್ದೇಶಕ ವೀರೇಶ್ ಬೊಮ್ಮಸಾಗರ ಉಡಾಳರ ಕಥೆಯಲ್ಲಿ ಬದುಕಿನ ಸೂಕ್ಷ್ಮತೆಯನ್ನು ಪರಿಚಯಿಸಿದ್ದಾರೆ. ಪ್ರಸ್ತುತ ಯುವ ಜಗತ್ತು ಹೀರೋಯಿಸಂನ ಗುಂಗಿನಲ್ಲಿ ಯಾವ ರೀತಿಯಲ್ಲಿ ಹಾದಿ ತಪ್ಪುತ್ತಿದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಎಲ್ಲಿಯೂ ಬೋರ್ ಎನಿಸದ ಕಥೆಯು ಪಕ್ಕಾ ರಂಜಿಸುತ್ತದೆ. ಮೊದಲರ್ಧ ನಗಿಸಿದರೆ, ದ್ವಿತೀಯಾರ್ಧದಲ್ಲಿ ಭಾವುಕರನ್ನಾಗಿಸುತ್ತದೆ. ನಟನೆಯಲ್ಲಿ ಚಂದನ್ ರಾಜ್ ಗಮನಸೆಳೆಯುತ್ತಾರೆ. ಈ ಕಥೆಗೆ ಅವರೇ ಹೀರೋ-ವಿಲನ್. ವಿದ್ಯಾಶ್ರೀ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಚೇತನ್ ದುರ್ಗಾ, ಡಿಂಗ್ರಿ ನರೇಶ್ ನಗಿಸುವ ಜತೆಗೆ ಕೊನೆಯಲ್ಲಿ ಅಳಿಸುತ್ತಾರೆ. ಯುಮುನಾ ಶ್ರೀನಿಧಿ, ನಾಗರಾಜ್ ರಾವ್ ಮನೋಜ್ಞ ಅಭಿನಯ ಕಥೆಯ ಹೈಲೈಟ್. ಹರ್ಷವರ್ಧನ್ ರಾಜ್ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.