| ಹರ್ಷವರ್ಧನ್ ಬ್ಯಾಡನೂರು
ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ರಾಜ್ ಬಿ. ಶೆಟ್ಟಿ ನಟನೆಯ ಜತೆಗೆ ನಿರ್ದೇಶನ, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಹಾಗೇ ಕನ್ನಡದ ಮಾತ್ರವಲ್ಲದೇ ಮಲಯಾಳಂ, ಹಿಂದಿ ಭಾಷೆಗಳಲ್ಲೂ ಮಿಂಚುತ್ತಿದ್ದಾರೆ. ಸಿನಿಮಾಗಳ ಜತೆ ಜತೆಗೆ ಒಟಿಟಿಯತ್ತ ಗಮನ ಹರಿಸಿರುವ ಅವರು ವೆಬ್ಸರಣಿಯೊಂದರ ಸಿದ್ಧತೆ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ರಾಜ್, ಮುಂದಿನ ಸಿನಿಮಾ, ಪ್ರಸ್ತುತ ಚಿತ್ರರಂಗದ ಸ್ಥಿತಿ&ಗತಿಗಳ ಕುರಿತು ಮುಕ್ತವಾಗಿ ಮಾತನಾಡಿದರು.
ವರ್ಷಕ್ಕೆ ನಾಲ್ಕು ಬೇಕೇಬೇಕು
ರಾಜ್ ಬಿ. ಶೆಟ್ಟಿ ಸದ್ಯ ನಾಲ್ಕು ಕನ್ನಡ, ಮೂರು ಮಲಯಾಳಂ ಮತ್ತು ಒಂದು ಹಿಂದಿ ಚಿತ್ರದಲ್ಲಿ ಬಿಜಿಯಿದ್ದಾರೆ. "ವರ್ಷಕ್ಕೆ ನಾಲ್ಕು ಸಿನಿಮಾ ಮಾಡಲೇಬೇಕು' ಎನ್ನುವ ಅವರು, "ಹಾಗಂತ ಒಟ್ಟಿಗೆ ಮೂರ್ನಾಲ್ಕು ಸಿನಿಮಾ ಮಾಡಬೇಕು ಅಂತಲ್ಲ. ನಾನು ಒಂದು ಸಿನಿಮಾ ಮುಗಿಸುವವರೆಗೂ ಬೇರೆ ಚಿತ್ರದಲ್ಲಿ ನಟಿಸುವುದಿಲ್ಲ. ಆ ಚಿತ್ರದ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಅಂದರೆ ನಾವು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರಬೇಕು ಎಂಬುದು ನನ್ನ ಉದ್ದೇಶ. ಆದರೆ, ನಾವೆಲ್ಲರೂ ದೊಡ್ಡದರ ಹುಡುಕಾಟದಲ್ಲಿರುವ ಕಾರಣ ಅದು ಸಾಧ್ಯವಾಗುತ್ತಿಲ್ಲ. ಅದು ತಪು$್ಪ ಅಂತ ನಾನು ಹೇಳುತ್ತಿಲ್ಲ. ಪ್ಯಾನ್ ಇಂಡಿಯಾ ಅಂತ ಎರಡು, ಮೂರು ವರ್ಷಗಳಿಗೆ ಒಂದು ಸಿನಿಮಾ ಮಾಡುತ್ತಾ ಕೂತರೆ, ಜನರನ್ನು ಥಿಯೇಟರ್ಗೆ ಕರೆತರಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಿರ್ದೇಶನ, ನಿರ್ಮಾಣ, ಬರವಣಿಗೆ ಅಂತ ನನ್ನ ಕೆಲಸಗಳಲ್ಲಿ ಬಿಜಿಯಿದ್ದರೂ ಬೇರೆ ಸಿನಿಮಾಗಳಲ್ಲೂ ನಟಿಸುತ್ತಿದ್ದೇನೆ' ಎನ್ನುತ್ತಾರೆ.
ನಟ ಆಗಿದ್ದು ಬೋನಸ್
2017ರ "ಒಂದು ಮೊಟ್ಟೆಯ ಕಥೆ' ಮೂಲಕ ನಾಯಕ, ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಾಜ್ ಬಿ. ಶೆಟ್ಟಿಗೆ, "ನೀವು ನೋಡಲು ಹೀಗಿದ್ದರೂ ಅವಕಾಶಗಳು ಸಿಗುತ್ತಿದೆಯಾ?' ಅಂತೆಲ್ಲ ಪ್ರಶ್ನೆಗಳು ಎದುರಾಗುತ್ತಿದ್ದವಂತೆ. "ನಾನು ಹೀಗೆ ಕಾಣಲು ನಾನು ಕಾರಣನಲ್ಲ. ಆದರೆ, ನಾನು ಹೇಗೆ ನಟಿಸುತ್ತೇನೆ? ಎಂಬುದು ನನ್ನ ಕಂಟ್ರೋಲ್ನಲ್ಲಿದೆ. ಕಲಿತು, ಓದಿ ತಿಳಿದು, ಪ್ರ್ಯಾಕ್ಟೀಸ್ ಮಾಡುತ್ತೇನೆ. ಹೀಗಾಗಿ ಈಗ ಅಂತಹ ಪ್ರಶ್ನೆಗಳಿಲ್ಲ. 2017ರಲ್ಲಿಯೇ ನನ್ನನ್ನು ಪ್ರೇಕ್ಷಕರು ಒಪ್ಪಿ ಆಗಿದೆ. ನಾನೊಬ್ಬ ನಿರ್ದೇಶಕ. ನಟನಾಗಿದ್ದು ಬೋನಸ್. ಸ್ಟಾರ್ ಆಗುವ ಅಗತ್ಯವೇ ನನಗಿಲ್ಲ. ತಂತ್ರಜ್ಞನಾಗಿ ಒಳ್ಳೆ ಸಿನಿಮಾ ಮಾಡುವುದಷ್ಟೇ ನನ್ನ ಗುರಿ' ಎನ್ನುತ್ತಾರೆ.
ಹಿಂದಿ ಡೆಬ್ಯೂ, ಮಲಯಾಳಂನಲ್ಲಿ ನಾಯಕ
ಈಗಾಗಲೇ "ಟರ್ಬೊ' ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ರಾಜ್, ಅದರ ಬೆನ್ನಲ್ಲೇ ಅನುರಾಗ್ ಕಶ್ಯಪ್ ನಿರ್ದೇಶಿಸುತ್ತಿರುವ ಹಿಂದಿ ಸಿನಿಮಾ ಮೂಲಕ ಬಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ. "ನಾನು ಅನುರಾಗ್ ಕಶ್ಯಪ್ ್ಯಾನ್. ಜಾಲತಾಣದಲ್ಲಿ ಅವರ ಸ್ಟೇಟಸ್ ನೋಡಿ ಬರವಣಿಗೆಯ ಕೆಲಸ ಸಿಗಬಹುದು ಅಂತ ಮೆಸೇಜ್ ಮಾಡಿದ್ದೆ. ಆದರವರು ಕ್ಯಾಮಿಯೋ ರೋಲ್ ಇದೆ ಅಂದರು. ಅವರ ಸಿನಿಮಾ ನೋಡಿಕೊಂಡು, ಸಿನಿಮಾ ಮಾಡಬೇಕು ಅಂತ ಬಂದವನು ನಾನು. ನನಗೆ ಅವರು ಸ್ಪೂರ್ತಿ. ಮೂರು ದಿನಗಳ ಕಾಲ ಚಿತ್ರೀಕರಣ ಮಾಡಿ ಬಂದಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ. ಹಾಗೇ ಮಲಯಾಳಂನಲ್ಲಿ "ರುದಿರಂ', "ಕೊಂಡಲ್' ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅವರು, ನಾಯಕನಾಗಿಯೂ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಒಟಿಟಿಯತ್ತ ಶೆಟ್ಟಿ ಚಿತ್ತ
ಹೀಗೆ ಸಿನಿಮಾಗಳಲ್ಲದೇ ಒಟಿಟಿಯತ್ತ ಕೂಡ ಗಮನ ಹರಿಸಿರುವ ರಾಜ್, ಸದ್ಯ ಕನ್ನಡ ವೆಬ್ಸರಣಿಯೊಂದರ ಕಥೆ ಮಾಡುತ್ತಿದ್ದಾರೆ. "ಕನ್ನಡ ಕಂಟೆಂಟ್ಗಳನ್ನು ಒಟಿಟಿಯವರು ಖರೀದಿಸುತ್ತಿಲ್ಲ ಎಂಬ ಮಾತಿದೆ. ಅದಕ್ಕೆ ಕಾರಣವೇನು ಎಂದು ಒಂದು ಒಟಿಟಿ ಸಂಸ್ಥೆಯವರನ್ನೇ ಕೇಳಿದ್ದೆ. ಅದಕ್ಕವರು ಕರ್ನಾಟಕದವರ ಡೇಟಾಬೇಸ್ ನೋಡಿದರೆ ಒಟಿಟಿಯಲ್ಲಿ ಕನ್ನಡ ಕಂಟೆಂಟ್ಗಳಿಗೆ ಪ್ರೇಕ್ಷಕರು ತೀರಾ ಕಡಿಮೆ ಎಂದರು. ಹೀಗಾಗಿ ಜನ ಮತ್ತೆ ಕನ್ನಡ ಸಿನಿಮಾಗಳನ್ನು ನೋಡವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಬೇರೆ ಭಾಷೆಗಳಲ್ಲಿ ನಟಿಸುತ್ತಿರುವುದೂ ಅದೇ ಕಾರಣ. ಒಟಿಟಿಯವರೇ ವೆಬ್ಸರಣಿ ಮಾಡಿಕೊಡಲು ಆರ್ ನೀಡಿದರು. ಎರಡು ಸೀಸನ್ಗಳ ನೈಜ ಟನೆಯಾಧಾರಿತ ಕೆಮ್ ಥ್ರಿಲ್ಲರ್ಅನ್ನು ನಾನೇ ನಿರ್ದೇಶಿಸಿ, ನಟಿಸಲಿದ್ದೇನೆ. ಈ ಸರಣಿ ಕನ್ನಡದಲ್ಲೇ ಮೂಡಿಬರಲಿದೆ' ಎನ್ನುತ್ತಾರೆ.