ಸಿನಿವಾಣಿ

ಮತ್ತೆ ಮಲಯಾಳಂಗೆ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ

ಬೆಂಗಳೂರು: ರಾಗಿಣಿ ದ್ವಿವೇದಿ ಕನ್ನಡದ ಜತೆಗೆ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಎಲ್ಲ ಭಾಷೆಯ ಚಿತ್ರರಂಗಗಳ ಪರಿಚಯವೂ ಅವರಿಗಿದೆ. ಇದೀಗ ಒಂಬತ್ತು ವರ್ಷಗಳ ಬಳಿಕ ಮತ್ತೆ ಮಾಲಿವುಡ್ ಪ್ರವೇಶಿಸುತ್ತಿದ್ದಾರೆ ರಾಗಿಣಿ. ವಿಶೇಷ ಏನೆಂದರೆ, ಮೂಲ ಮಲಯಾಳಂ ತಂಡವೇ ಸೇರಿ ಮಾಡುತ್ತಿರುವ ಈ ಚಿತ್ರ ಕನ್ನಡದಲ್ಲಿಯೂ ಮೂಡಿಬರಲಿದೆ.

ತಮ್ಮ ಸಿನಿಮಾ ಕರಿಯರ್​ನಲ್ಲಿಯೇ ಈ ಪಾತ್ರ ತುಂಬ ವಿಶೇಷ ಎಂಬುದು ರಾಗಿಣಿ ಮಾತು. ‘ವಿಭಿನ್ನ ಸಂಸ್ಕೃತಿಯುಳ್ಳ, ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ಚಿತ್ರವಿದು. ನಾನಿಲ್ಲಿ ವಿಧವೆ ಪಾತ್ರದಲ್ಲಿ ಕಾಣಿಸಿಕೊಂಡರೂ, ಆಕೆ ತುಂಬ ಗಟ್ಟಿಗಿತ್ತಿ. ಎಲ್ಲವನ್ನೂ ಎದುರಿಸುವ ಮನಸ್ಥಿತಿಯುಳ್ಳವಳು. ಕರ್ನಾಟಕ ಮತ್ತು ಕೇರಳ ಎರಡೂ ಕಡೆಗಳಲ್ಲಿ ಈ ಚಿತ್ರದ ಶೂಟಿಂಗ್ ನಡೆಯಲಿದೆ. ಹಾಗಾಗಿ, ಎರಡೂ ಭಾಷೆಗಳಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ನನ್ನ ಕೆರಿಯರ್​ನಲ್ಲಿ ಈ ತರಹದ ಪಾತ್ರ ಮಾಡಿದ್ದು ಇದೇ ಮೊದಲು’ ಎಂಬುದು ಅವರ ಮಾತು.

ಹಾಗಾದರೆ, ಇದು ನಾಯಕಿ ಪ್ರಧಾನ ಚಿತ್ರವಾ? ಈ ಪ್ರಶ್ನೆಗೂ ಉತ್ತರಿಸುವ ರಾಗಿಣಿ, ‘ಇಡೀ ಸಿನಿಮಾ ಕಥಾನಾಯಕಿಯ ಸುತ್ತ ನಡೆಯಲಿದೆ. ಒಂದರ್ಥದಲ್ಲಿ ನಾಯಕಿ ಪ್ರಧಾನ ಚಿತ್ರ ಎನ್ನಬಹುದು. ಸದ್ಯ ಮಲಯಾಳಂನಲ್ಲಿ ಚಿತ್ರಕ್ಕೆ ‘ಶೈಲಾ’ ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಕನ್ನಡದ ಟೈಟಲ್ ಇನ್ನಷ್ಟೇ ಅಧಿಕೃತವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ. ಕೇರಳದಲ್ಲಿ ಬ್ರಿಟೀಷರು ಕಟ್ಟಿಸಿದ 200 ವರ್ಷಗಳ ಹಳೆಯ ಬೃಹತ್ ಕಟ್ಟಡವೊಂದರಲ್ಲಿ ಕಳೆದ ನಾಲ್ಕು ದಿನಗಳಿಂದ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಬಾಲು ನಾರಾಯಣ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ‘ದೃಶ್ಯಂ’ ಖ್ಯಾತಿಯ ಅನಿಲ್ ಜಾನ್ಸನ್ ಸಂಗೀತ ಸಂಯೋಜಿಸಿದರೆ, ಅರುಣ್ ಛಾಯಾಗ್ರಹಣ ಮಾಡುತ್ತಿದ್ದಾರೆ.