ಬೆಂಗಳೂರು: ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ( Raghu Dixit ) ಅವರು ಎರಡನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಾಯಕಿ ವಾರಿಜಾಶ್ರೀ ವೇಣುಗೋಪಾಲ್ ಅವರನ್ನು ವರಿಸಿದ್ದಾರೆ.
ಮದುವೆ ಸಮಾರಂಭವು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಜಯನಗರದ ಶ್ರೀ ಸಾಯಿ ಕನ್ವೆನ್ಷನ್ ಹಾಲ್ನಲ್ಲಿ ನೆರವೇರಿತು. ಮದುವೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನವದಂಪತಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಆಪ್ತರು ಅಭಿನಂದಿಸುತ್ತಿದ್ದಾರೆ.
ಅಂದಹಾಗೆ, ರುಘು ದೀಕ್ಷಿತ್ ಮತ್ತು ವಾರಿಜಾಶ್ರೀ ನಡುವೆ 16 ವರ್ಷ ವಯಸ್ಸಿನ ಅಂತರವಿದೆ. ವಾರಿಜಾಶ್ರೀ ಅವರಿಗೆ 34 ವರ್ಷವಾದರೆ, ರಘು ಅವರಿಗೆ 50 ವರ್ಷ. ವಾರಿಜಾ ಅವರು ಮೂಲತಃ ಬೆಂಗಳೂರಿನವರು. ಸಂಗೀತ ಮತ್ತು ಜಾಜ್ ಸಂಗೀತದ ಸಂಯೋಜನೆಯ 'ಕರ್ನಾಟಿಕ್ ಸ್ಕ್ಯಾಟ್ ಸಿಂಗಿಂಗ್' ಕಲೆಯ ಸೃಷ್ಟಿಕರ್ತೆ. ಈಕೆ 'ಜೆಸ್ಸಿ 4' ಆಲ್ಬಮ್ಗಾಗಿ ಜೇಕಬ್ ಕೊಲ್ಲಿಯರ್ ಹಾಗೂ ಅನುಷ್ಕ ಶಂಕರ್ ಜತೆಗೆ ಗ್ರ್ಯಾಮಿ ನ್ಯಾಮಿನೇಶನ್ ಪಡೆದಿದ್ದಾರೆ.
ರಘು ಮತ್ತು ವಾರಿಜಾ ಇಬ್ಬರೂ ಸಂಗೀತ ಕ್ಷೇತ್ರ ಹಿನ್ನೆಲೆಯವರಾದ್ದರಿಂದ ಆರಂಭದ ಪರಿಚಯ, ಸ್ನೇಹಕ್ಕೆ ತಿರುಗಿ, ನಂತರದಲ್ಲಿ ಪ್ರೀತಿಗೆ ಬದಲಾಗಿ, ಇದೀಗ ವೈವಾಹಿಕ ಸಂಬಂಧದೊಂದಿಗೆ ಗಟ್ಟಿಯಾಗಿದೆ. ಕಳೆದ ಫೆಬ್ರವರಿಯಲ್ಲಿ ರಘು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಾರಿಜಾಶ್ರೀ ಅವರ ಗ್ರ್ಯಾಮಿ ನಾಮಿನೇಶನ್ ಅನ್ನು ಅಭಿನಂದಿಸಿ 'ಸ್ನೇಹಿತೆ' ಎಂದು ಉಲ್ಲೇಖಿಸಿದ್ದರು. ಇದಾದ ಕೆಲವೇ ತಿಂಗಳಲ್ಲಿ ತಮ್ಮಿಬ್ಬರ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ಮದುವೆ ಮೂಲಕ ಅಧಿಕೃತವಾಗಿ ತಮ್ಮ ಸಂಬಂಧವನ್ನು ದೃಢಪಡಿಸಿದ್ದಾರೆ.
ವಾರಿಜಾಶ್ರೀ ಜತೆಗಿನ ಪ್ರೇಮ ಸಂಬಂಧದ ಬಗ್ಗೆ ಈ ಹಿಂದೆ ಮಾತನಾಡಿದ್ದ ರಘು, ನಾನು ನಿಜವಾಗಿಯೂ ಊಹಿಸಿರಲಿಲ್ಲ. ಉಳಿದ ಜೀವನವನ್ನು ಒಂಟಿಯಾಗಿರಲು ನಿರ್ಧರಿಸಿದ್ದೆ. ಆದರೆ, ಜೀವನವೂ ತನ್ನದೇಯಾದ ಪ್ಲಾನ್ ಅನ್ನು ಹೊಂದಿತ್ತು. ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹ ಆರಂಭವಾಯಿತು. ಅದು ಪ್ರೀತಿಯಾಗಿ ಬೆಳೆಯಿತು. ನಾವಿಬ್ಬರು ಒಂದೇ ರೀತಿಯ ಆಸಕ್ತಿಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ನಮ್ಮಿಬ್ಬರ ನಡುವೆ ಗಟ್ಟಿಯಾದ ಬಂಧವಿದೆ. ವಾರಿಜಾಶ್ರೀ ಅವರ ಹಿರಿಯರ ಆಶೀರ್ವಾದದೊಂದಿಗೆ ಈ ಹೊಸ ಅಧ್ಯಾಯವನ್ನು ಆರಂಭಿಸಲು ಉತ್ಸುಕರಾಗಿದ್ದೇವೆ ಎಂದು ರಘು ಹೇಳಿದ್ದರು.
ಅಂದಹಾಗೆ, ರಘು ದೀಕ್ಷಿತ್ ಅವರು 2005ರಲ್ಲಿ ನೃತ್ಯಗಾರ್ತಿ ಮಯೂರಿ ಉಪಾಧ್ಯಾಯ ಅವರನ್ನು ಮದುವೆಯಾಗಿದ್ದರು. ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರು 2016 ರಿಂದ ದೂರವಾಗಿದ್ದು, 2019ರ ಜೂನ್‌ನಲ್ಲಿ ಬೆಂಗಳೂರು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅದೇ ವರ್ಷ ಡಿಸೆಂಬರ್ 9ರಂದು ವಿಚ್ಛೇದನ ಪಡೆದರು. ಇದೀಗ ಮತ್ತೊಮ್ಮೆ ವೈವಾಹಿಕ ಜೀವನಕ್ಕೆ ರಘು ಕಾಲಿಟ್ಟಿದ್ದಾರೆ.