ಸಿನಿವಾಣಿ

ಗೆಲುವಿನ ಖುಷಿಯಲ್ಲಿ ರಾಘಣ್ಣ ; ಹವಾಲಾ ಹಣದ ಸುತ್ತ '13' ಚಿತ್ರದ ಕಥೆ

ಬೆಂಗಳೂರು:

ರಾಘವೇಂದ್ರ ರಾಜಕುಮಾರ್​, ಶೃತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ, ನರೇಂದ್ರ ಬಾಬು ನಿರ್ದೇಶಿಸಿದ್ದ '13' ಚಿತ್ರ ಕಳೆದ ಶುಕ್ರವಾರ (ಸೆ. 15) ಬಿಡುಗಡೆಯಾಗಿತ್ತು. ರಾಜ್ಯದ ಹಲವೆಡೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ಸಕ್ಸಸ್​ಮೀಟ್​ ಕರೆದಿತ್ತು. ಮೊದಲು ಮಾತನಾಡಿದ ರಾಘವೇಂದ್ರ ರಾಜಕುಮಾರ್​, 'ಚಿತ್ರದಲ್ಲಿ ನಾವೊಬ್ಬರೇ ಕಾಣಿಸಿಕೊಂಡಾಗ ಖುಷಿಯಾಗಲ್ಲ, ಪ್ರೇಕ್ಷಕರ ಅಭಿಪ್ರಾಯ ನೋಡಿ ತೃಪ್ತಿಯಾಯಿತು. ತಮಿಳುನಾಡಲ್ಲೂ ನನ್ನ ಫ್ರೆಂಡ್ಸ್ ಇದ್ದಾರೆ, ಅವರೆಲ್ಲ ಕಾಲ್ ಮಾಡಿ ಇಲ್ಲಿಯೂ ಸಿನಿಮಾ ಬರುತ್ತಾ ಅಂತ ಕೇಳ್ತಿದ್ದಾರೆ. ನಮ್ಮ ನಿಮ್ಮೆಲ್ಲರ ಕೆಲಸ ಆಗಿದೆ. ಇನ್ನೂ ಹೆಚ್ಚು ಜನ ನೋಡಿ ಹರಸಬೇಕು. ಸಿನಿಮಾ ನೋಡುತ್ತಿರುವ ಎಲ್ಲಾ ಪ್ರೇಕ್ಷಕರಿಗೆ ನನ್ನ ಕೋಟಿ ನಮನಗಳು' ಎಂದರು.


ನಿರ್ದೇಶಕ ನರೇಂದ್ರ ಬಾಬು, 'ಶೃತಿ ಮೇಡಂ ಪಾತ್ರ ಸಿನಿಮಾನ ಒಂದು ಪೀಕ್ ನಲ್ಲಿ ತೆಗೆದುಕೊಂಡು ಹೋಗುತ್ತೆ. ಅವರು ಮಲೇಶಿಯಾದಲ್ಲಿರುವುದರಿಂದ ವಾಯ್ಸ್ ನೋಟ್ ಕಳಿಸಿದ್ದಾರೆ' ಎಂದು ಅದನ್ನು ಕೇಳಿಸಿದರು. ಆಡಿಯೋದಲ್ಲಿ ಶೃತಿ, 'ಚಿತ್ರದ ಬಗ್ಗೆ ಒಳ್ಳೆ ರಿವ್ಯೂಸ್ ಬಂದಿದೆ. 25 ವರ್ಷಗಳ ನಂತರ ರಾಗಣ್ಣ ಜೊತೆ ಆ್ಯಕ್ಟ್ ಮಾಡಿದ್ದು, ಅದನ್ನು ಜನ ಮೆಚ್ಚಿರುವುದು ನಿಜಕ್ಕೂ ಖುಷಿಯಾಗಿದೆ. ನಾನೇನಾದರೂ ಚೆನ್ನಾಗಿ ಪರ್ ಫಾರ್ಮ್ ಮಾಡಿದ್ದೇನೆಂದರೆ ಅದರ ಎಲ್ಲ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು, ರಾಗಣ್ಣ ಕೂಡ ತುಂಬಾ ಕೋ ಆಪರೇಟ್ ಮಾಡಿದರು' ಎಂದು ಸಂತಸ ವ್ಯಕ್ತಪಡಿಸಿದ್ದರು.

ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಾರದಿಂದ 30 ಥಿಯೇಟರ್​ಗಳನ್ನು ಹೆಚ್ಚಿಸುವ ಆಲೋಚನೆ ಚಿತ್ರತಂಡದ್ದು. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ಪ್ರಮೋದ್​ ಶೆಟ್ಟಿ, 'ಕುಂದಾಪುರದಲ್ಲಿ ಹಬ್ಬದ ದಿನವೂ 70-80 % ಕಲೆಕ್ಷನ್ ಆಗಿದೆ.ರಾಗಣ್ಣ ಶೃತಿ ಅವರ ಪಾತ್ರಗಳನ್ನು ನೋಡಲೆಂದೇ ಜನ ಬರ್ತಿದಾರೆ. ಸುಮಾರು ಚಿತ್ರಗಳಲ್ಲಿ ಪೋಲಿಸ್ ಪಾತ್ರಗಳನ್ನು ಮಾಡಿದ್ದರೂ ಈ ಚಿತ್ರದಲ್ಲಿ ವಿಶೇಷವಾಗಿ ಗುರ್ತಿಸ್ತಿದಾರೆ' ಎಂದರು. ಚಿತ್ರಕ್ಕೆ ಶೋಗನ್‌ಬಾಬು ಸಂಗೀತ, ಅಜಯ್ ಮಂಜು ಛಾಯಾಗ್ರಹಣ, ಗಿರೀಶ್ ಕುಮಾರ್ ಸಂಕಲನ, ಮದನ್ ಹರಿಣಿ, ಶಶಿಕುಮಾರ್ ನೃತ್ಯ ನಿರ್ದೇಶನ ಹಾಗೂ ಜಯಸಿಂಹ ಸಂಭಾಷಣೆಯಿದೆ.